ಯೋಗ ಸಾಧಕ ಯೋಗೇಂದ್ರ

yoga
Published on

ರೇವಣಸಿದ್ದಪ್ಪ ಪಾಟೀಲ್ ಬೀದರ್
ಆಹ್ಲಾದಕರ ವಾತಾವರಣ, ಸುಪ್ರಭಾತದ ಸಮಯ, ತಣ್ಣನೆ ಗಾಳಿಯ ಮಧ್ಯೆ ಗುಂಪಾ ರಸ್ತೆಯ ಬಿವಿಬಿ ಕಾಲೇಜು ಆವರಣ ಸಂಪೂರ್ಣ ಯೋಗಮಯವಾಗಿರುತ್ತದೆ. ಸಾಮೂಹಿಕ ಯೋಗ ಮಾಡುವವರ ಎದುರು ಕುಳಿತು ಶಿಕ್ಷಕ ತನ್ಮಯದಿಂದ ಮಾರ್ಗದರ್ಶನ ಮಾಡುತ್ತಾರೆ…
ಆ ಯೋಗ ಶಿಕ್ಷಕರೇ ಯೋಗೇಂದ್ರ ಯದಲಾಪುರೆ. ವೃತ್ತಿಯಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕರಾಗಿರುವ ಅವರು ಪ್ರವೃತ್ತಿಯಲ್ಲಿ ಯೋಗಪ್ರಿಯರು. ಬಿವಿಬಿ ಕಾಲೇಜಿನಲ್ಲಿ ಒಂದೂವರೆ ದಶಕದಿಂದ ನಿತ್ಯ ಯೋಗ ಮಾಡಿಸುತ್ತಿದ್ದಾರೆ. ಸಮರ್ಪಣಾ ಭಾವದಿಂದ ಪ್ರತಿಯೊಬ್ಬರಿಗೂ ನಿರಂತರ ಬಿಸಿಲು, ಮಳೆ, ಚಳಿ ಎನ್ನದೆ ಉಚಿತವಾಗಿ ಯೋಗದ ವಿವಿಧ ಆಸನ, ಧ್ಯಾನ ಮಾಡುವ ಬಗೆಯನ್ನು ಹೇಳಿಕೊಡುತ್ತಿದ್ದಾರೆ.
ಯದಲಾಪುರೆ ಅವರಿಗೆ ಎದೆನೋವು ಕಾಣಿಸಿತ್ತು. ವಿವಿಧ ಆಸ್ಪತ್ರೆಗಳಲ್ಲಿ ತೋರಿಸಿದ್ದರೂ ಕಮ್ಮಿಯಾಗಿಲ್ಲ. ಸ್ಕ್ಯಾನಿಂಗ್ ಮಾಡಿಸಿದರೆ ಎಲ್ಲವೂ ಸರಿ ಇತ್ತು. ಗೆಳೆಯರೊಬ್ಬರು ಯೋಗ ಮಾಡಲು ಸಲಹೆ ನೀಡಿದರು. ನಿತ್ಯ ಯೋಗ ಮಾಡುವುದನ್ನು ರೂಢಿಸಿಕೊಂಡ ನಂತರ ಎದೆನೋವು ಮಾಯವಾಯಿತು. ಬಾಬಾ ರಾಮದೇವ್, ರವಿಶಂಕರ ಗುರೂಜಿ ಅವರ ಹಲವು ಶಿಬಿರಗಳಲ್ಲಿ ಪಾಲ್ಗೊಂಡು ತರಬೇತಿ ಪಡೆದು ಇದೀಗ ನಿತ್ಯ ನೂರಾರು ಜನರಿಗೆ ತರಬೇತಿ ನೀಡುತ್ತಿದ್ದಾರೆ.
ಮೂಲತಃ ಬೀದರ್ ತಾಲೂಕಿನ ಯದಲಾಪುರ ನಿವಾಸಿಯಾದ ಯೋಗೇಂದ್ರ ಅವರು ಸದ್ಯ ಚಿಕ್ಕಪೇಟ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು. ಒಂದೂವರೆ ದಶಕದ ಹಿಂದೆ ಬಿವಿಬಿ ಕಾಲೇಜಿಗೆ ವಾಯು ವಿಹಾರಕ್ಕೆ ಬರುತ್ತಿದ್ದ ಬೆರಳೆಣಿಕೆ ಜನರಿಗೆ ಯೋಗಾಭ್ಯಾಸ ಮಾಡಿಸಲು ಶುರು ಮಾಡಿದರು. ಇದೀಗ ನಿತ್ಯವೂ ನೂರರ ಸಮೀಪ ಬರುತ್ತಿದ್ದಾರೆ. ಬೆಳಗ್ಗಿನ ಜಾವ 5.30ರಿಂದ 7ರವರೆಗೆ ಭಕ್ತಿಪಥ, ದೇಶ ಭಕ್ತಿಯ ಸಂಗೀತದೊಂದಿಗೆ ಯೋಗ ತರಬೇತಿ ನಡೆಯುತ್ತದೆ.
ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬುದು ನನ್ನ ಆಶಯವಿತ್ತು. ಯೋಗದ ರೂಪದಲ್ಲಿ ಅಳಿಲು ಸೇವೆ ಸಲ್ಲಿಸುತ್ತಿರುವೆ. ಶಿಬಿರಕ್ಕೆ ವ್ಯಾಪಾರಿಗಳು, ವೃದ್ಧರು, ಮಹಿಳೆಯರು, ವಿದ್ಯಾರ್ಥಿಗಳು ಆಸಕ್ತಿಯಿಂದ ಬರುತ್ತ ಆರೋಗ್ಯ ಉತ್ತಮವಾಗಿ ಇರಿಸಿಕೊಂಡಿದ್ದಾರೆ ಎನ್ನುತ್ತಾರೆ ಯೋಗೇಂದ್ರ ಯದಲಾಪುರೆ. ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚೀನ ಕಲೆ. ಭಾರತ ಜಗತ್ತಿಗೆ ನೀಡಿದ ಒಂದು ಬಹುದೊಡ್ಡ ಕೊಡುಗೆ. ಪ್ರತಿಯೊಬ್ಬರೂ ನಿತ್ಯ ಯೋಗ ಮಾಡುವುದನ್ನು ರೂಡಿಸಿಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ.

ಡಾ.ಸಂಕೇಶ್ವರ ಪ್ರೇರಣೆ
ಯೋಗೇಂದ್ರ ಯದಲಾಪುರೆ ಅವರಿಗೆ ವಿ.ಆರ್.ಎಲ್ ಸಮೂಹ ಸಂಸ್ಥೆ ಚೇರ್ಮನ್ ಡಾ.ವಿಜಯ ಸಂಕೇಶ್ವರ ಪ್ರೇರಣೆ. ಶಿಕ್ಷಣ ಮುಗಿದ ನಂತರ ಯದಲಾಪುರೆ ಕೆಲವರ್ಷ ವಿಆರ್ಎಲ್ ಟ್ರಾನ್ಸ್ ಪೋರ್ಟ್ ನಲ್ಲಿ ಕೆಲಸ ಮಾಡಿದ್ದಾರೆ. ಬೀದರ್ ಗಾಂಧಿಗಂಜ್ ನಲ್ಲಿ ಇದ್ದ ಟ್ರಾನ್ಸ್ ಪೋರ್ಟ್ ಕಚೇರಿಗೆ ಆಗಾಗ್ಗೆ ಬರುತ್ತಿದ್ದ ಸಂಕೇಶ್ವರ ಅವರ ಮಾತುಗಳಿಂದ ಪ್ರಭಾವಿತನಾಗಿದ್ದರಿಂದಲೇ ನಾನು ಇಂದು ಈ ಸ್ಥಾನದಲ್ಲಿ ಇದ್ದೇನೆ ಎನ್ನುವ ಯೋಗೇಂದ್ರ, ಎಲ್ಲಕ್ಕಿಂತ ಮೊದಲು ಕಾಯಕ ಮುಖ್ಯ. ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ನಿತ್ಯ ಕೆಲಸ ಮಾಡಿದ ವ್ಯಕ್ತಿ ಉನ್ನತ ಸ್ಥಾನಕ್ಕೆ ಹೋಗುತ್ತಾರೆ ಎಂಬ ಸಂಕೇಶ್ವರ ಮಾತು ಸದಾ ಸ್ಫೂರ್ತಿದಾಯಕ ಎಂದು ಹೇಳುತ್ತಾರೆ.

ಬಹುಮುಖಿ ಪ್ರತಿಭೆ
ಯೋಗೇಂದ್ರ ಯದಲಾಪುರೆ ಅವರದು ಬಹುಮುಖಿ ಪ್ರತಿಭೆ. ಶಿಕ್ಷಕ ವೃತ್ತಿ ಜತೆ ಯೋಗ, ಸಾಹಿತ್ಯ, ಸಂಗೀತ, ಕೃಷಿ ಹೀಗೆ ನಾನಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಾನಾ ಕವನಗಳನ್ನು ಸಹ ರಚಿಸಿದ್ದಾರೆ. ಪ್ರಸ್ತುತ ಪತಂಜಲಿ ಯೋಗ ಸಮಿತಿ ಬೀದರ್ ಜಿಲ್ಲಾ ಪ್ರಭಾರಿಯಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಯದಲಾಪುರೆ ಸೇವೆ ಗುರುತಿಸಿ ಆದರ್ಶ ಶಿಕ್ಷಕ ಪ್ರಶಸ್ತಿ, ರೋಟರಿ ಕ್ಲಬ್ ಪ್ರಶಸ್ತಿ, ದೇಶಪಾಂಡೆ ಪ್ರತಿಷ್ಠಾನದ ಯೋಗರತ್ನ, ಕಸಾಪದಿಂದ ಯೋಗ ದುರಂಧರ ಸೇರಿ ನಾನಾ ಸಂಸ್ಥೆಗಳಿಂದ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಯೋಗ ಮಾಹಿತಿಗೆ ಯೋಗೇಂದ್ರ (70190 71385) ಅವರನ್ನು ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net