

ಮಲ್ಲಪ್ಪ ಗೌಡ ಔರಾದ್
ಆರೋಗ್ಯಕರ ಜೀವನ ಶೈಲಿಗೆ ಯೋಗಾಸನ ಅತ್ಯಂತ ಪ್ರಮುಖ ಅಸ್ತ್ರ. ಇಡೀ ಜಗತ್ತು ಯೋಗದ ಪವಾಡ ಒಪ್ಪಿಕೊಂಡಿದ್ದು, ಇಂಥ ಮಹತ್ವದ ಶಿಕ್ಷಣವನ್ನು ಪ್ರತಿ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಇಲ್ಲಿನ ದಂಪತಿ ಎಲೆಮರೆ ಕಾಯಿಯಂತೆ ಶ್ರಮಿಸುತ್ತಿದ್ದಾರೆ.
ಮಹಾರಾಷ್ಟ್ರ ಗಡಿಯಲ್ಲಿರುವ ಭೋಪಾಲಗಡ (ಬೆಳಕುಣಿ) ಗ್ರಾಮದ ಡಾ.ಶಾಲಿವಾನ್ ಉದಗೀರೆ ಮತ್ತು ಕಲ್ಪನಾ ಶಿಕ್ಷಕ ದಂಪತಿ ಯೋಗ ಶಿಕ್ಷಣ ಪ್ರಸಾರ, ಪ್ರಚಾರಕ್ಕಾಗಿ ದುಡಿಯುತ್ತಿದ್ದಾರೆ. ಔರಾದ್ನಲ್ಲಿ ನೆಲೆಸಿ ಎರಡು ದಶಕದಿಂದ ಸರ್ಕಾರಿ ಶಿಕ್ಷಕ ವೃತ್ತಿ ಜತೆಗೆ ಯೋಗ ಶಿಕ್ಷಣ ಮೈಗೂಡಿಸಿಕೊಂಡು ಗ್ರಾಮೀಣ ಭಾಗದಲ್ಲಿ ಯೋಗ ತರಬೇತಿ ನೀಡುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.
ಸಮಾಜದ ಏಳಿಗೆಗಾಗಿ ಯೋಗ ಶಿಕ್ಷಣದ ಅಗತ್ಯವನ್ನು ಮನಗಂಡು ನೂರಾರು ಶಿಕ್ಷಕರಿಗೆ ಯೋಗ ತರಬೇತಿ ಮತ್ತು ವಿದ್ಯಾರ್ಥಿಗಳು, ಹಿರಿಯರಿಗೆ ಉಚಿತ ಯೋಗ ಹೇಳಿಕೊಡುವ ಕಾರ್ಯ ಮಾಡುತ್ತಿದ್ದಾರೆ. ಭಾರತ ಸೇವಾ ದಳದಲ್ಲಿ ಯೋಗ ಶಿಕ್ಷಕರಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಿಕ್ಷಕರು ಮತ್ತು ಸ್ವಯಂ ಸೇವಕರಿಗೆ ನಿರಂತರ ತರಬೇತಿ ನೀಡುತ್ತಿದ್ದಾರೆ. ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಚಿನ್ನದ ಅಂಗಳ ಕಾರ್ಯಕ್ರಮ ಮೂಲಕ ಯೋಗ ಹೇಳಿಕೊಡುತ್ತಿದ್ದಾರೆ. ಶಾಲಿವಾನ್ ದಂಪತಿ ಯೋಗವನ್ನು ಬಾಲ್ಯದಿಂದಲೇ ಹವ್ಯಾಸ ಮಾಡಿಕೊಂಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವ ಸಂಘದ ಹಿರಿಯ ಹನುಮಂತರಾವ ಪಾಟೀಲ್ ಪ್ರೇರಣೆ ಪಡೆದು ಯೋಗಾಸನದಲ್ಲಿ ಕೀರ್ತಿ ಗಳಿಸಿದ್ದಾರೆ.
ಡಾ.ಶಾಲಿವಾನ್ ಉದಗೀರೆ 2002ರಲ್ಲಿ ಭವಾನಿ ಬಿಜಲಗಾಂವ್ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆಗೆ ಸೇರಿದ್ದು, ನಿತ್ಯದ ಪಾಠ ಜತೆ ಯೋಗ ಶಿಕ್ಷಣ ಕೌಶಲ ಕುರಿತು ಅನೇಕ ತರಬೇತಿ ನೀಡಿದ್ದಾರೆ. ಪ್ರಸ್ತುತ ಕ್ಷೇತ್ರ ಸಂಪನ್ಮೂಲ ಕೇಂದ್ರ ಔರಾದ್ನಲ್ಲಿ ಸಮನ್ವಯ ಶಿಕ್ಷಣದ ಸಂಪನ್ಮೂಲ ಶಿಕ್ಷಕರಾಗಿದ್ದಾರೆ. ಇವರ ಪತ್ನಿ ಕಲ್ಪನಾ ಪಾಟೀಲ್ ಪಟ್ಟಣದ ಪ್ರೌಢ ಶಾಲೆಯಲ್ಲಿ 2004ರಿಂದ ಆಂಗ್ಲ ಶಿಕ್ಷಕರಾಗಿ ಸೇವೆ ಮಾಡುವ ಜತೆಯಲ್ಲಿ ಯೋಗ ಶಿಕ್ಷಣ ನೀಡುತ್ತಿದ್ದಾರೆ.
ಶಾಲಿವಾನ್ ಸರ್ಕಾರಿ ವೃತ್ತಿಯೊಂದಿಗೆ ಯೋಗ ಸೇರಿ ನಾನಾ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷರಾಗಿ ನಾನಾ ಸಂಘ-ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶಾಲಿವಾನ್ ಸಂಪರ್ಕ ಸಂಖ್ಯೆ 94487 15931.
ಮನುಷ್ಯನಿಗೆ ಬಾಹ್ಯ ಸೌಂದರ್ಯದಷ್ಟೇ ಆಂತರಿಕ ಸೌಂದರ್ಯವೂ ಮುಖ್ಯವಾಗಿರುತ್ತದೆ. ಈ ಎರಡೂ ಸರಿಯಾಗಿ ಇಟ್ಟುಕೊಳ್ಳುವಲ್ಲಿ ಯೋಗ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿನಿತ್ಯ ಯೋಗ ಮಾಡುವುದರಿಂದ ಆರೋಗ್ಯಕರ ಜೀವನ ನಡೆಸಬಹುದಾಗಿದೆ.| ಡಾ.ಶಾಲಿವಾನ್ ಉದಗೀರೆಯೋಗ ಶಿಕ್ಷಕ
ಬಹುಮುಖ ಪ್ರತಿಭೆಯುಳ್ಳ ಶಾಲಿವಾನ್, ಕಲ್ಪನಾ ದಂಪತಿ ಶಿಕ್ಷಕ ವೃತ್ತಿಯೊಂದಿಗೆ ಯೋಗದಲ್ಲೂ ತೊಡಗಿಸಿಕೊಂಡು ತಾಲೂಕಿನ ಕೀರ್ತಿ ರಾಜ್ಯಾದ್ಯಂತ ಹರಡಿಸುವ ಮೂಲಕ ಶಿಕ್ಷಕರಿಗೆ ಮಾದರಿಯಾಗಿದ್ದಾರೆ. ಇವರ ಯೋಗ ಸೇವೆ ಸದಾ ಹೀಗೆ ಮುಂದುವರಿಯಲಿ.| ಡಾ.ತುಳಸಿರಾಮ ದೊಡ್ಡೆಕ್ಷೇತ್ರ ಶಿಕ್ಷಣಾಧಿಕಾರಿ ಔರಾದ್