ಬರ ಪರಿಹಾರ ಸಮರ್ಪಕ ವಿತರಿಸಿ

Rait sang
Published on

ಬೀದರ್: ಎಲ್ಲ ರೈತರಿಗೆ ಸಮರ್ಪಕ ಬರ ಪರಿಹಾರ ವಿತರಿಸುವಂತೆ ಜಿಲ್ಲಾ ರೈತ ಸಂಘ ಒತ್ತಾಯಿಸಿದೆ.
ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿಪತ್ರ ಸಲ್ಲಿಸಿದ ಸಂಘದ ಪ್ರಮುಖರು, ಜಿಲ್ಲೆಯಲ್ಲಿ 11 ಸಾವಿರಕ್ಕೂ ಅಧಿಕ ರೈತರಿಗೆ ಈವರೆಗೆ ಬರ ಪರಿಹಾರ ಸಿಕ್ಕಿಲ್ಲ. ತಕ್ಷಣ ಎಲ್ಲರಿಗೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ವಿಮೆ ಕಟ್ಟಿರುವ ರೈತರಿಗೆ ಬೆಳೆ ನಷ್ಟವಾದರೂ ಪರಿಹಾರ ವಿತರಿಸಿಲ್ಲ. ಪರಿಶೀಲನೆ ನಡೆಸಿ ಕ್ರಮ ವಹಿಸಬೇಕು. ಕೆಲ ಸಕ್ಕರೆ ಕಾರ್ಖಾನೆಗಳು ಕಬ್ಬು ಪೂರೈಸಿದ ಬಿಲ್ ನೀಡಿಲ್ಲ. ರೈತರು ತೀವ್ರ ಸಂಕಷ್ಟ ಎದುರಿಸಬೇಕಾಗಿದೆ. ಹಲವು ಬಾರಿ ಹೋರಾಟ ಮಾಡಿದರೂ ಸ್ಪಂದಿಸಿಲ್ಲ. ಹೀಗಾಗಿ ಬಾಕಿ ಹಣ ಪಾವತಿಗೆ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕೃಷಿ ಪಂಪ್ ಸೆಟ್ ಗಳಿಗೆ ಸಮರ್ಪಕ ಹಾಗೂ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬೇಕು. ರಾತ್ರಿ ವೇಳೆ ತೋಟದ ಮನೆಗೆ ವಿದ್ಯುತ್ ಪೂರೈಸಬೇಕು. ಜಿಲ್ಲೆಯ ಎಲ್ಲ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ರೈತರು ತಂದಿರುವ ದವಸ ಧಾನ್ಯಗಳಿಗೆ ಛನ್ನಿ ಹೆಸರಿನಲ್ಲಿ ಕ್ವಿಂಟಾಲ್ ಗೆ ಒಂದು ಕೆಜಿ 400 ಗ್ರಾಂ ಕಡಿತ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಬೇಕು. ಬಸವಕಲ್ಯಾಣ ತಾಲೂಕಿನ ಅಟ್ಟೂರ್ ಮತ್ತು ಕೋಹಿನೂರ ಕೆರೆ ಒಡೆದು ಅಪಾರ ಹಾನಿಯಾಗಿದೆ. ನೀರಿನ ರಭಸಕ್ಕೆ ಸುಮಾರು 1000 ಎಕರೆ ಹೊಲದಲ್ಲಿನ ಮಣ್ಣು ಕೊಚ್ಚಿ ಹೋಗಿದೆ. ಸರ್ವೇ ಶೀಘ್ರ ಪೂರ್ಣಗೊಳಿಸಿ ಪರಿಹಾರ ಒದಗಿಸಬೇಕು ಆಗ್ರಹಿಸಿದ್ದಾರೆ.
ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ್, ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ಪ್ರಮುಖರಾದ ಸುಭಾಷ ರಗಟೆ, ಪ್ರವೀಣ ಕುಲಕರ್ಣಿ, ಚಂದ್ರಶೇಖರ ಜಮಖಂಡಿ, ರೇವಣಸಿದ್ದಪ್ಪ ಯರಬಾಗ, ಪ್ರಕಾಶ ಬಾವಗೆ, ಸತೀಶ ನನ್ನೂರೆ, ವಿಶ್ವನಾಥ ಧರಣೆ, ಧೂಳಪ್ಪ ಆಣದೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net