ಕಾಂಗ್ರೆಸ್ ಸರ್ಕಾರದಿಂದ ಜನರ ಸುಲಿಗೆ

Dr Shailebder Beldale
Published on

ಬೀದರ್: ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರ ಜನಸಾಮಾನ್ಯರ ಮೇಲೆ ಬರೆ ಎಳೆದಿದೆ. ಸರ್ಕಾರ ತನ್ನ ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿ ಎಡವಿದ್ದು, ಆರ್ಥಿಕ ದಿವಾಳಿ ಹಂತಕ್ಕೆ ಬಂದು ನಿಂತಿದೆ. ಜನರ ಜೇಬಿಗೆ ಕತ್ತರಿ ಹಾಕುತ್ತ ಅಕ್ಷರಶಃ ಹಗಲುದರೋಡೆ, ಸುಲಿಗೆ ದಂಧೆಗೆ ಇಳಿದಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಕಿಡಿಕಾರಿದ್ದಾರೆ.
ಪ್ರತಿ ಲೀಟರ್ ಪೆಟ್ರೋಲ್ ಬೆಲೆ 3 ರೂ. ಹಾಗೂ ಡೀಸೆಲ್ ಬೆಲೆ 3.50 ರೂ. ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರ ಮತ್ತೊಮ್ಮೆ ತನ್ನ ಜನವಿರೋಧಿ ನೀತಿಯನ್ನು ಸಾಬೀತುಪಡಿಸಿದೆ. ತೈಲ ಬೆಲೆ ಹೆಚ್ಚಳ ಬಡ, ಮಧ್ಯಮ ವರ್ಗದ ಜನರಿಗೆ ಆರ್ಥಿಕವಾಗಿ ಮತ್ತಷ್ಟು ಸಂಕಷ್ಟಕ್ಕೆ ತಳ್ಳಲಿದೆ. ಬರುವ ದಿನಗಳಲ್ಲಿ ಇದು ಗೃಹಬಳಕೆ ಸೇರಿದಂತೆ ನಾನಾ ಅಗತ್ಯ ವಸ್ತುಗಳ ದರದಲ್ಲಿ ಸಹ ಗಣನೀಯ ವೃದ್ಧಿಗೆ ಕಾರಣವಾಗಿ, ಜನಸಾಮಾನ್ಯರ ಬದುಕು ದುಸ್ತರಗೊಳಿಸಲಿದೆ. ಸರ್ಕಾರ ಕೂಡಲೇ ತೈಲ ಬೆಲೆ ಮೇಲೆ ಹೇರಿರುವ ಹೆಚ್ಚುವರಿ ಕರವನ್ನು ವಾಪಸ್ ಪಡೆಯಬೇಕೆಂದು ಭಾನುವಾರ ಇಲ್ಲಿ ಹೊರಡಿಸಿದ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ತನ್ನ ಪಂಚ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಕ್ರೋಢೀಕರಿಸುವಲ್ಲಿ ಹೆಣಗಾಡುತ್ತಿದೆ. ಕಳೆದ ಒಂದು ವರ್ಷದಿಂದ ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿವೆ. ಯಾವೊಂದು ಹೊಸ ಕೆಲಸ ಆಗುತ್ತಿಲ್ಲ. ಒಂದೊಂದಾಗಿ ದರ ಏರಿಕೆ ನಿರಂತರ ಮಾಡುತ್ತ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಕೆಲವು ಗ್ಯಾರಂಟಿಗಾಗಿ ಹಲವು ರೀತಿಯಲ್ಲಿ ದರ ಹೆಚ್ಚಿಸಿ, ಜನರಿಂದ ಗ್ಯಾರಂಟಿ ಲಾಭಕ್ಕಿಂತ ಅಧಿಕ ಹಣ ವಸೂಲಿಯಲ್ಲಿ ತೊಡಗಿದೆ. ಈ ರೀತಿ ಜನಸಾಮಾನ್ಯರ ಮೇಲೆ ಕರಗಳ ಭಾರ ಹಾಕಿ, ಜನರ ಜೇಬಿಗೆ ಕತ್ತರಿ ಹಾಕುತ್ತ ಗ್ಯಾರಂಟಿ ಜಾರಿ ಮಾಡುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ್ದಾರೆ.
ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯ ಸರ್ಕಾರ ತೈಲದ ಮೇಲಿನ ಕರ ಹೆಚ್ಚಳ ಮಾಡಿದೆ. ಚುನಾವಣೆಗೂ ಮುನ್ನ ಹೆಚ್ಚಳ ಮಾಡಿದರೆ ಜನರ ಭಾರಿ ಆಕ್ರೋಶಕ್ಕೆ ಗುರಿಯಾಗಿ, ಚುನಾವಣೆಯಲ್ಲಿ ಹಿನ್ನಡೆ ಆಗಬಹುದು ಎಂಬ ಭಯದಿಂದ ಈಗ ಈ ನಿರ್ಧಾರ ಮಾಡಿದ್ದಾರೆ. ಈ ತರಹದ ನಿರ್ಣಯದ ಹಿಂದಿನ ಮರ್ಮ ಏನೆಂಬುದು ರಾಜ್ಯದ ಜನತೆಗೆ ಚೆನ್ನಾಗಿ ಗೊತ್ತಾಗಿದೆ. ಸರ್ಕಾರದ ಈ ಜನ ವಿರೋಧಿ ನೀತಿ-ನಿಲುವುಗಳಿಗೆ ಜನರು ತಕ್ಕ ಪಾಠ ಕಲಿಸುವುದು ಗ್ಯಾರಂಟಿ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಕಳೆದೊಂದು ವರ್ಷದಲ್ಲಿ ನಿರಂತರವಾಗಿ ದರ ಹೆಚ್ಚಳದಲ್ಲಿ ತೊಡಗಿ ಜನರ ಮೇಲೆ ಭಾರಿ ಹೊರೆ ಹಾಕುವ ಕೆಲಸ ಮಾಡುತ್ತಿದೆ. 200 ಯುನಿಟ್ ವಿದ್ಯುತ್ ಉಚಿತ ಕೊಡಲು ಆರಂಭಿಸಿ, ವಿದ್ಯುತ್ ಬಿಲ್ ಗಣನೀಯ ಏರಿಸಿದೆ. ನೋಂದಣಿ ಶುಲ್ಕ ದುಪ್ಪಟ್ಟು ಮಾಡಿದೆ. ಬಾಂಡ್‌ಗಳ ಬೆಲೆಯಂತೂ ನಾಲ್ಕೈದು ಪಟ್ಟು ಜಾಸ್ತಿ ಮಾಡಿದೆ. ಮದ್ಯದ ದರ ಎರಡ್ಮೂರು ಸಲ ಹೆಚ್ಚಿಸಿದೆ. ನೀರಿನ ಕರ ಜಾಸ್ತಿ ಮಾಡಿದೆ. ಬಸ್ ಪ್ರಯಾಣ ದರದಲ್ಲಿ ಸಹ ಈಗ ಭಾರಿ ಪ್ರಮಾಣದ ಹೆಚ್ಚಳಕ್ಕೂ ಮುಂದಾಗಿದೆ. ಹೀಗೆ ಅನೇಕ ಕರಗಳನ್ನು ಜನರ ಮೇಲೆ ಹಾಕಿ ಗ್ಯಾರಂಟಿ ಯೋಜನೆ ಜಾರಿಯಲ್ಲಿ ತೊಡಗಿದೆ. ಸರ್ಕಾರ ಗ್ಯಾರಂಟಿ ಜಾರಿಗೂ ಮುನ್ನ ಇದರ ಪೂರ್ವಾಪರ ವಿಚಾರ ಮಾಡಿಲ್ಲ. ಹೇಗಾದರೂ ಮಾಡಿ ಜನರ ಮತವನ್ನು ಪಡೆದು ಅಧಿಕಾರದ ಚುಕ್ಕಾಣಿ ಹಿಡಿದರೆ ಸಾಕೆಂಬ ನಿಟ್ಟಿನಲ್ಲಿ ಬೇಕಾಬಿಟ್ಟಿ ಯೋಜನೆ ಘೋಷಿಸಿ, ಅಧಿಕಾರಕ್ಕೆ ಬಂದ ಮೇಲೆ ಜನಸಾಮಾನ್ಯರ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹದಿನೈದಕ್ಕೂ ಹೆಚ್ಚು ಬಾರಿ ಬಜೆಟ್ ಮಂಡಿಸಿದ್ದಾರೆ. ಆರ್ಥಿಕ ಸ್ಥಿತಿಗತಿ ಬಗ್ಗೆ ಸಾಕಷ್ಟು ಅನುಭವ ಹೊಂದಿದ್ದಾರೆ. ಆದರೆ ಅವರ ಸಾರಥ್ಯದಲ್ಲೇ ರಾಜ್ಯ ಆರ್ಥಿಕವಾಗಿ ದಿವಾಳಿಯಂತಹ ದುಸ್ಥಿತಿಗೆ ಬಂದಿರುವುದು ದುರದೃಷ್ಟಕರ ಸಂಗತಿ. ಆತಂಕ ಮೂಡಿಸಿದೆ. ಒಂದರ ಮೇಲೊಂದರಂತೆ ಬೆಲೆ ಏರಿಕೆ ಮಾಡುತ್ತಿರುವುದು ನೋಡಿದರೆ ಈ ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂಬುದೇ ತಿಳಿಯದಂತಾಗಿದೆ. ವರ್ಷದ ಹಿಂದೆ ತೈಲ ಬೆಲೆ ಏರಿಕೆ ವಿರೋಧಿಸಿ ಸ್ಕೂಟರ್ ಶವಯಾತ್ರೆ ಮಾಡಿದ ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಈಗ ಜನರಿಗೆ ಉತ್ತರ ಕೊಡಲಿ ಎಂದು ಸವಾಲೆಸೆದಿದ್ದಾರೆ.

ಅತಿವೃಷ್ಟಿ ಹಾನಿ ಪರಿಹಾರಕ್ಕೆ ಆಗ್ರಹ
ಅತಿವೃಷ್ಟಿಯಿಂದ ಬಸವಕಲ್ಯಾಣ ತಾಲೂಕಿನ ಕೋಹಿನೂರ ವಲಯದಲ್ಲಿ ವ್ಯಾಪಕ ಹಾನಿಯಾಗಿದೆ. ಅಟ್ಟೂರ್ ಮತ್ತು ಕೋಹಿನೂರ ಕೆರೆಗಳು ಒಡೆದು ತಳಪಾತ್ರದಲ್ಲಿನ ಸಹಸ್ರಾರು ಎಕರೆ ಹೊಲಗಳಲ್ಲಿನ ಫಲವತ್ತಾದ ಮಣ್ಣ ಕೊಚ್ಚಿಕೊಂಡು ಹೋಗಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಅನೇಕರ ಬಿತ್ತಿದ ಬೆಳೆ ಕೊಚ್ಚಿಹೋಗಿವೆ. ತೆರೆದ ಬಾವಿ ಮುಚ್ಚಿಹೋಗಿವೆ. ಪಂಪ್ಸೆಟ್, ಮೋಟಾರ್ಗಳು ಕೊಚ್ಚಿಹೋಗಿವೆ. ರಸ್ತೆ, ಸೇತುವೆಗಳು ಹಾಳಾಗಿವೆ. ಕೂಡಲೇ ರಾಜ್ಯ ಸರ್ಕಾರ ರೈತರಿಗೆ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಿ ನೆರವಿಗೆ ಬರಬೇಕು. ಸಾರ್ವಜನಿಕ ಆಸ್ತಿಪಾಸ್ತಿ ದುರಸ್ತಿಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net