ಶರಣರ ಸನ್ಮಾರ್ಗದಿಂದ ಶಾಂತಿ-ನೆಮ್ಮದಿ

Prashad nilaya
Published on

ಬೀದರ್: ಶಿವಶರಣರು 12ನೇ ಶತಮಾನದಲ್ಲಿ ಹಾಕಿಕೊಟ್ಟ ಸತ್ಯ, ಶುದ್ಧ ಕಾಯಕ-ದಾಸೋಹ ಹಾಗೂ ನಿಷ್ಠೆಗಳ ಸನ್ಮಾರ್ಗದಲ್ಲಿ ನಡೆದರೆ ಜೀವನದಲ್ಲಿ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ನಗರದ ಡಾ.ಚನ್ನಬಸವ ಪಟ್ಟದೇವರು ಪ್ರಸಾದ ನಿಲಯದಲ್ಲಿ ಏರ್ಪಡಿಸಿದ್ದ 164ನೇ ತಿಂಗಳ ಅನುಭವ ಮಂಟಪ ಮತ್ತು ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಅಂದು ಸಮಾಜದಲ್ಲಿನ ಹಿಂದುಳಿದ, ಶೋಷಿತರು, ಸ್ತ್ರೀಯರ ಸಮಾನತೆಗಾಗಿ ಹೋರಾಡಿದ ಬಸವಣ್ಣನವರು ನೀಡಿದ ವಚನ ಸಾಹಿತ್ಯ ಇಂದು ಜಗತ್ತಿಗೆ ದಾರಿದೀಪವಾಗಿದೆ ಎಂದರು.
ಭಕ್ತನು ಐಕ್ಯ ಅಥವಾ ಶರಣ ಸ್ಥಳದಲ್ಲಿದಲ್ಲಿದ್ದರೂ ನಿಂದನೆಗಳು ಬಂದರೆ ಸಮಾಧಾನದಿಂದ ಬಸವ ತತ್ವ ಪ್ರಚಾರಕ್ಕಾಗಿ ಜೀವನ ತ್ಯಾಗ ಮಾಡಬೇಕು. 12ನೇ ಶತಮಾನದಲ್ಲಿ 1.96 ಲಕ್ಷ ಜಂಗಮರು ಬಸವ ಧರ್ಮ ಪ್ರಸಾರ ಮಾಡುತ್ತಿದ್ದರು. ಈ ಕಾರ್ಯವನ್ನು ನಾವೆಲ್ಲರೂ ಮಾಡಬೇಕು ಎಂದು ಹೇಳಿದರು.
ಲಿಂಗಪೂಜೆ, ಕಾಯಕ, ದಾಸೋಹ ತತ್ವಗಳು ನಿರಂತರ ನಡೆಯಬೇಕು. ಶರಣರ ಸಂಗ ಮಾಡುವುದರಿಂದ ಮನದ ಮಲೀನತೆ ದೂರವಾಗಿ ವ್ಯಕ್ತಿಯಲ್ಲಿ ಮಹಾಶಕ್ತಿ ಉದಯಿಸುತ್ತದೆ ಮತ್ತು ಬದುಕು ಸಂತೃಪ್ತಿಯಿಂದ ಸಾಗುತ್ತದೆ ಎಂದರು.
ಬಸವಕಲ್ಯಾಣ ಬಂದವರ ಓಣಿಯ ಪೂಜ್ಯ ಸತ್ಯಕ್ಕ ಅನುಭಾವ ನೀಡಿ, ನಾನು ಯಾರು ಎಂಬುದನ್ನು ಅರಿತು ಜೀವನ ಸಾಗಿಸಬೇಕು. ಇಷ್ಟಲಿಂಗ ಶಿವಯೋಗ, ಕಾಯಕ ದಾಸೋಹ ತತ್ವ ಅರಿಯಬೇಕು. ಇಷ್ಟಲಿಂಗ ಶಿವಯೋಗ ಮಾಡುವುದರಿಂದ ಅಂಗ ಲಿಂಗಮಯವಾಗುತ್ತದೆ. ವ್ಯಕ್ತಿ ಸರ್ವಾಂಗಲಿಂಗಿ ಆಗುತ್ತಾನೆ. ಅಂತರಂಗ ಬಹಿರಂಗ ಶುದ್ಧಿಯಾಗುತ್ತದೆ ಎಂದು ಹೇಳಿದರು.
ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರ ಚಂದ್ರಕಾಂತ ಮಿರ್ಚೆ ಉದ್ಘಾಟಿಸಿ ಮಾತನಾಡಿ, ನಿತ್ಯವೂ ಒತ್ತಡದ ಬುದುಕು ಸಾಗುತ್ತಿರುವ ನಾವು ಶರಣರು, ಗುರುಗಳ ಸತ್ಸಂಗ ಮತ್ತು ಧರ್ಮಗ್ರಂಥಗಳ ಅಧ್ಯಯನದಿಂದ ಕೊಂಚ ನೆಮ್ಮದಿ ಪಡೆಯಬಹುದು. ಪ್ರವಚನಗಳನ್ನು ಓದುವ, ಕೇಳುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಪ್ರಸಾದ ನಿಲಯದ ಕಾರ್ಯದರ್ಶಿ ಪ್ರೊ.ಎಸ್.ಬಿ. ಬಿರಾದಾರ್ ಅಧ್ಯಕ್ಷತೆ ವಹಿಸಿದ್ದರು. ಮಹಾನಂದಾ ಕೋಟೆ, ಆಕಾಶ ಕೋಟೆ ಮತ್ತು ಕವಿತಾ ಪಾಟೀಲ್ ಗುರುಬಸವ ಪೂಜೆ ನೆರವೇರಿಸಿದರು.
ಪ್ರಮುಖರಾದ ರಾಜಕುಮಾರ ಜುಬರೆ, ಪ್ರೊ.ಸಂಗ್ರಾಮ ಎಂಗಳೆ, ಸುವರ್ಣಾ ಶರಣಪ್ಪ ಚಿಮಕೋಡೆ, ಗುರುನಾಥ ಬಿರಾದಾರ್, ಮಹೇಶ ಮಜ್ಜಿಗೆ, ಶಕುಂತಲಾ ಬೆಲ್ದಾಳೆ, ಮೀನಾಕ್ಷಿ ಪಾಟೀಲ್, ಲಕ್ಷ್ಮೀ ಬಿರಾದಾರ್, ಕಸ್ತೂರಬಾಯಿ ಬಿರಾದಾರ್, ಮಹಾನಂದಾ ಸ್ವಾಮಿ, ಪ್ರೇಮಾ, ಉಷಾ ಮಿರ್ಚೆ, ತೀರ್ಥಮ್ಮ, ಮಾಲಾಶ್ರೀ, ನೀಲಕಂಠ ಬಿರಾದಾರ್, ಭೀಮಾಶಂಕರ ಬಿರಾದಾರ್ ಇತರರಿದ್ದರು.
ಶಾಲಿವಾನ ಬೋಗಾರ ಮತ್ತು ಚನ್ನಬಸಪ್ಪ ನೌಬಾದೆ ವಚನ ಗಾಯನ ನಡೆಸಿಕೊಟ್ಟರು. ಆಕಾಶ ಕೋಟೆ ಸ್ವಾಗತಿಸಿದರು. ಉಮಾಕಾಂತ ಮೀಸೆ ನಿರೂಪಣೆ ಮಾಡಿ ವಂದಿಸಿದರು. ನಿವೃತ್ತ ಚಿತ್ರಕಲಾ ಶಿಕ್ಷಕ ಶ್ರೀಕಾಂತ ಬಿರಾದಾರ್ ಮತ್ತು ನಿವೃತ್ತ ದೈಹಿಕ ಶಿಕ್ಷಕ ಶಿವಾನಂದ ಮಠಮತಿ ಅವರನ್ನು ಪೂಜ್ಯರು ಸನ್ಮಾನಿಸಿ ಆಶೀರ್ವದಿಸಿದರು. ನಂತರ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯ ಮಕ್ಕಳಿಂದ ಪರಿಸರ ಪ್ರಜ್ಞೆ ಕುರಿತು ಶಿವಲೀಲಾ ನಿರ್ದೇಶನದಲ್ಲಿ ಕಿರುನಾಟಕ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net