ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಸಿ ನೆಡುವಿಕೆ

Atal Bihari Vajpeyee School Ghodampalli-2
Published on

ಬೀದರ್: ತಾಲ್ಲೂಕಿನ ನಾಗೋರಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಪ್ಪ ಜಾನಕನೋರ ಅವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಸಿ ನೆಡುವಿಕೆಯೊಂದಿಗೆ ತಮ್ಮ ಜನ್ಮದಿನವನ್ನು ಬುಧವಾರ ವಿಶಿಷ್ಟವಾಗಿ ಆಚರಿಸಿಕೊಂಡರು.
ಘೋಡಂಪಳ್ಳಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ತಾಲ್ಲೂಕಿನ ವಿವಿಧ ಶಾಲಾ, ಕಾಲೇಜುಗಳ 12 ವಿದ್ಯಾರ್ಥಿಗಳಿಗೆ ತಲಾ ರೂ. 1 ಸಾವಿರ ನಗದು, ಫಲಕ, ನೋಟ್‍ಪುಸ್ತಕ ಹಾಗೂ ಪೆನ್ ವಿತರಿಸಿದರು. ಶಾಲೆ ಆವರಣದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಟ್ಟರು.
ಇತ್ತೀಚಿನ ದಿನಗಳಲ್ಲಿ ಜನ್ಮದಿನ ಆಚರಣೆ ಪ್ರತಿಷ್ಠೆ ವಿಷಯ ಆಗುತ್ತಿದೆ. ಅನೇಕರು ಅದಕ್ಕಾಗಿ ದುಂದು ವೆಚ್ಚ ಮಾಡುತ್ತಿದ್ದಾರೆ. ಆದರೆ, ಉತ್ತಮ ಕಾರ್ಯಗಳೊಂದಿಗೆ ಜನ್ಮದಿನ ಆಚರಿಸಿಕೊಂಡರೆ ಅದಕ್ಕೊಂದು ಅರ್ಥ ಬರುತ್ತದೆ. ಸಮಾಜಕ್ಕೆ ಉತ್ತಮ ಸಂದೇಶ ರವಾನೆಯೂ ಆಗುತ್ತದೆ ಎಂದು ನರಸಪ್ಪ ಜಾನಕನೋರ ಹೇಳಿದರು.
ತಮ್ಮ ಜನ್ಮದಿನದ ಅಂಗವಾಗಿ ವಿದ್ಯಾರ್ಥಿಗಳನ್ನು ಸಾಧನೆಗೆ ಪ್ರೇರೇಪಿಸಲು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಪ್ರದಾನ ಮಾಡಲಾಗಿದೆ. ಪರಿಸರ ಪ್ರಜ್ಞೆ ಬೆಳೆಸಲು ಸಸಿಗಳನ್ನು ನೆಡಲಾಗಿದೆ ಎಂದು ತಿಳಿಸಿದರು.
ಶಾಲೆಯ ಪ್ರಾಚಾರ್ಯ ಶರಣಪ್ಪ ಬಿರಾದಾರ, ಉಪ ಪ್ರಾಚಾರ್ಯ ರವೀಂದ್ರ ಚಟ್ನಳ್ಳಿ, ಸಮಾಜ ಸೇವಕ ರಾಹುಲ್ ಮಿಶ್ರಾ, ಶಿಕ್ಷಕ ಜೋಶಿ, ಗ್ರಾಮ ಪಂಚಾಯಿತಿ ಸದಸ್ಯರಾದ ವಿಜಯಕುಮಾರ, ಆದಿತ್ಯ ರೆಡ್ಡಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net