ಉಜ್ವಲ ಭವಿಷ್ಯಕ್ಕಾಗಿ ದುಶ್ಚಟದಿಂದ ದೂರವಿರಿ

Gurukul
Published on

ಭಾಲ್ಕಿ: ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಮೊದಲು ದುಶ್ಚಟಗಳಿಂದ ವಿದ್ಯಾರ್ಥಿಗಳು ದೂರ ಇರಬೇಕು. ನಿರಂತರ ಅಧ್ಯಯನ ಮಾಡಿ ಗುರಿ ಮುಟ್ಟಬೇಕು ಎಂದು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಐಐಟಿ ಪ್ರವೇಶಕ್ಕೆ ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಪೂಜ್ಯರು, ಶೈಕ್ಷಣಿಕ ಸಾಧನೆಗೆ ಮೊದಲು ಅಡ್ಡಿಯಾಗುವುದು ದುಶ್ಚಟ. ಮೊದಮೊದಲು ಶೋಕಿಗೆ ಆರಂಭವಾಗುವ ಈ ಚಟಗಳು ಮುಂದೆ ಹೆಮ್ಮೆರವಾಗಿ ಬೆಳೆದು ಜೀವನವೇ ನಾಶ ಮಾಡುತ್ತವೆ. ಹೀಗಾಗಿ ವಿದ್ಯಾರ್ಥಿಗಳು ಚಟಗಳಿಂದ ದೂರ ಇದ್ದು, ಶಿಕ್ಷಣದ ಕಡೆಗೆ ಮಾತ್ರ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.
ಉತ್ತಮ ರ್ಯಾಂಕ್ನೊಂದಿಗೆ ಗುರುಕುಲದ 38 ಮಕ್ಕಳು ಐಐಟಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದು ಖುಷಿ ತಂದಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ದೇಶದ ವಿವಿಧ ಪ್ರತಿಷ್ಠಿತ ಐಐಟಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಬಹುದು. ಪಿಯುಸಿಯಲ್ಲಿ ತೋರಿದ ನಿಷ್ಠೆ, ನಿರಂತರ ಅಧ್ಯಯನ ಮುಂದಿನ ಐದು ವರ್ಷ ಪೂರ್ಣಗೊಳಿಸಿದರೆ ಭವಿಷ್ಯ ಉಜ್ವಲಗೊಳ್ಳಲಿದೆ ಎಂದರು.
ಹಿರೇಮಠ ಸಂಸ್ಥಾನ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಗುರುಕುಲ ಆಡಳಿತಾಧಿಕಾರಿ ಮೋಹನರಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ, ಶೈಕ್ಷಣಿಕ ನಿರ್ದೇಶಕ ಎಂ. ಶ್ರೀನಿವಾಸರಡ್ಡಿ, ಜೆಇಇ ತರಬೇತುದಾರ ರಾಘವೇಂದ್ರ ಪತ್ರಿ ಇತರರಿದ್ದರು.

ಜೆಐಐ ಸಾಧಕರಿಗೆ ಸನ್ಮಾನ 21ಕ್ಕೆ
ಜೆಇಇ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಐಐಟಿ ಪ್ರವೇಶಕ್ಕೆ ಅರ್ಹರಾದ ಗುರುಕುಲದ 38 ಮಕ್ಕಳ ಸನ್ಮಾನ ಸಮಾರಂಭ ಜೂ.21ರಂದು ಗುರುಕುಲ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು. ಅಂದು ಬೆಳಗ್ಗೆ 11ಕ್ಕೆ ಕಾರ್ಯಕ್ರಮವನ್ನು ಲೋಕಾಯುಕ್ತ ಬಿ.ಎಸ್. ಪಾಟೀಲ್ ಉದ್ಘಾಟಿಸುವರು. ಎಲ್ಲ 38 ವಿದ್ಯಾರ್ಥಿಗಳು ಪಾಲಕರೊಂದಿಗೆ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net