ಬೀದರಿಗೆ ಹೆಚ್ಚಿನ ಸಹಕಾರ ಕೊಡಿ

Somanna sanman
Published on

ಬೀದರ್: ಕಳೆದ ಹತ್ತು ವರ್ಷದಲ್ಲಿ ರೈಲ್ವೆ ಇಲಾಖೆಯಿಂದ ಸಾಕಷ್ಟು ಅನುಕೂಲ ಜಿಲ್ಲೆಯ ಜನರಿಗೆ ಆಗಿದೆ. ಆದರೂ ಇನ್ನಷ್ಟು ಹೆಚ್ಚಿನ ಸಹಕಾರ ಗಡಿ ಜಿಲ್ಲೆ ಬೀದರ್ಗೆ ನೀಡಬೇಕು ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಮನವಿ ಮಾಡಿದರು.
ನವದೆಹಲಿಯಲ್ಲಿ ಕೇಂದ್ರದ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಸನ್ಮಾನಿಸಿ ಮಾತನಾಡಿ, ಹಿಂದಿನ ಎರಡು ಅವಧಿಯಲ್ಲಿ ಜಿಲ್ಲೆಯಿಂದ ದೇಶದ ವಿವಿಧ ಭಾಗಕ್ಕೆ ತೆರಳಲು ಹತ್ತಾರು ಹೊಸ ರೈಲುಗಳನ್ನು ತಂದಿರುವೆ. ಬೀದರ್ ನಿಲ್ದಾಣದಲ್ಲಿ ಅಮೃತ ಭಾರತ ಯೋಜನೆಯಡಿ ನವೀಕರಣ ಕಾರ್ಯ ನಡೆಯುತ್ತಿದೆ. ಇಂಥ ಹಲವು ಯೋಜನೆಗಳು ಜಿಲ್ಲೆಯಲ್ಲಿ ಮುಂದುವರಿದಿದ್ದು, ಸಹಕಾರ ನೀಡಬೇಕು ಎಂದರು.
ಬೀದರ್-ನಾಂದೇಡ್ ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರದಿಂದ ಅನುದಾನ ಪಡೆಯಲು ಕ್ರಮ ಕೈಗೊಳ್ಳಬೇಕು. ಕಳೆದ ವರ್ಷ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 149 ಕೋಟಿ ರೂ. ಹಾಗೂ ಎಸ್ಎಂಐ ಯೊಜನೆಯಡಿ 114 ಕೋಟಿ ರೂ. ಅನುದಾನದಲ್ಲಿ ವಿವಿಧ ನೀರಾವರಿ ಕಾಮಗಾರಿಗಳಿಗೆ ರಾಜ್ಯದಿಂದ ಅಗತ್ಯ ಪತ್ರ ವ್ಯವಹಾರ ಮಾಡಿಸಿ ಕಳುಹಿಸಿಕೊಟ್ಟಿರುವೆ. ಈ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೊಳಿಸಲು ಪ್ರಯತ್ನಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಕೋರಿದರು.
ಕೇಂದ್ರ ಯುವ ವ್ಯವಹಾರ ಮತ್ತು ಕಾರ್ಮಿಕ ಉದ್ಯೋಗ ಸಚಿವ ಡಾ.ಮನ್ಸುಖ್ ಮಾಂಡವಿಯಾ, ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಹ ಖೂಬಾ ಭೇಟಿಯಾಗಿ ಬೀದರ್ ಕ್ಷೇತ್ರದ ಅಭಿವೃದ್ದಿಗೆ ಅಗತ್ಯ ಸಹಕಾರ ನೀಡುವಂತೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net