

ಬೀದರ್: ನಗರ ಸೇರಿ ಜಿಲ್ಲೆಯ ವಿವಿಧೆಡೆ ಶನಿವಾರ ಮಧ್ಯಾಹ್ನ ಉತ್ತಮ ಮಳೆಯಾಗಿದೆ. ಮುಂಗಾರು ಬೆಳೆಗಳಿಗೆ ಮಳೆ ಪೂರಕವಾಗಿದ್ದು, ರೈತರಲ್ಲಿ ಖುಷಿ ತಂದಿದೆ.
ಶುಕ್ರವಾರ ಜಿಲ್ಲೆಯ ಕೆಲವೆಡೆ ಮಳೆಯಾಗಿತ್ತು. ಶನಿವಾರ ಬೆಳಗ್ಗೆಯಿಂದ ಮೋಡಕವಿದ ವಾತಾವರಣ ಇತ್ತು. ಮಧ್ಯಾಹ್ನ ಸುಮಾರು ಒಂದು ಗಂಟೆ ನಗರದಲ್ಲಿ ಮಳೆ ಸುರಿದಿದೆ. ನಂತರ ಆಗಾಗ್ಗೆ ಕೆಲಕಾಲ ಮುಸಲಧಾರೆ ಆಗಿದೆ.
ಮಳೆಗಾಲ ಆರಂಭದ ನಂತರ ಇದೇ ಮೊದಲ ಬಾರಿ ನಗರ ಸೇರಿ ಜಿಲ್ಲೆಯ ಎಲ್ಲ ಹೋಬಳಿ ಪ್ರದೇಶಗಳಲ್ಲಿ ಇಷ್ಟೊಂದು ಸುದೀರ್ಘ ಅವ ಉತ್ತಮ ಮಳೆಯಾಗಿದ್ದು, ಹಳ್ಳ-ಕೊಳ್ಳಗಳಿಗೆ ನೀರು ಬಂದಿದೆ. ಬಾವಿಗಳ ನೀರು ನಾಲ್ಕೈದು ಅಡಿ ಹೆಚ್ಚಿದೆ.
ನಗರದಲ್ಲಿ ಸುರಿದ ಮಳೆಯಿಂದ ಹಲವೆಡೆ ಅಂಗಡಿ, ಮನೆಗಳಿಗೆ ನೀರು ನುಗ್ಗಿ ಜನರು ಇನ್ನಿಲ್ಲದ ತಾಪತ್ರಯ ಅನುಭವಿಸಿದರು. ನಾನಾ ಕಡೆ ರಸ್ತೆಯಲ್ಲಿ ನೀರು ಸಂಗ್ರಹವಾಗಿ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಬಹುತೇಕ ಕಡೆ ಚರಂಡಿಗಳು ಜಾಮ್ ಆಗಿ ರಸ್ತೆಗಳುದ್ದಕ್ಕೂ ನೀರು ಹರಿಯಿತು. ತಗ್ಗು ಪ್ರದೇಶಗಳು ಹಳ್ಳಗಳಾಗಿ ಮಾರ್ಪಟ್ಟಿದ್ದವು.