ಬಿಜೆಪಿ ಮುಖಂಡ ಚಾಂದಿವಾಲೆ ಮೃತದೇಹ ಪತ್ತೆ

chandiwale
Published on

ಬೀದರ್: ಬಿಜೆಪಿ ಮುಖಂಡ, ಹಿರಿಯ ಯೋಗ ಶಿಕ್ಷಕ ಧೋಂಡಿರಾಮ ಚಾಂದಿವಾಲೆ ಅವರ ಮೃತದೇಹವು ನೆರೆಯ ಮಹಾರಾಷ್ಟ್ರದ ಉಸ್ಮಾನಬಾದ್ ಜಿಲ್ಲೆಯ ಉಮರ್ಗಾ ಬಳಿ ಪತ್ತೆಯಾಗಿದೆ.
ಉಮರ್ಗಾ ಬಳಿಯ ಹೆದ್ದಾರಿ ಪಕ್ಕದಲ್ಲಿ ಶನಿವಾರ ಬೆಳಗ್ಗಿನ ಜಾವ ಮೃತದೇಹ ಪತ್ತೆಯಾಗಿದೆ. ಚಾಂದಿವಾಲೆ ಜೇಬಿನಲ್ಲಿ ದೊರೆತ ಬಸ್ ಟಿಕೆಟ್ ಮಾಹಿತಿಯಿಂದ ಮಹಾರಾಷ್ಟ್ರ ಪೊಲೀಸರು ಜಿಲ್ಲೆಗೆ ಸಂಪರ್ಕಿಸಿದ್ದಾರೆ. ಕುಟುಂಬಸ್ಥರು ಶನಿವಾರ ಮಧ್ಯಾಹ್ನ ಉಮರ್ಗಾಕ್ಕೆ ತೆರಳಿದ್ದಾರೆ.
ಇದು ಕೊಲೆ ಅಥವಾ ರಸ್ತೆ ಅಪಘಾತ ಎನ್ನುವುದು ಪೊಲೀಸರ ತನಿಖೆಯಿಂದಲೇ ಗೊತ್ತಾಗಲಿದೆ. ಉಮರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತಃ ಭಾಲ್ಕಿ ತಾಲೂಕಿನ ಲಖನಗಾಂವ್ ನಿವಾಸಿಯಾದ ಚಾಂದಿವಾಲೆ ಹಲವು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದರು. ಯೋಗದಲ್ಲಿ ಅತಿವ ಆಸಕ್ತಿ ಹೊಂದಿದ ಚಾಂದಿವಾಲೆ 2008ರಿಂದ ನಗರದ ಬರೀದ್ಶಾಹಿ ಗಾರ್ಡನ್ ನಲ್ಲಿ ಉಚಿತ ಯೋಗ ಶಿಬಿರ ನಡೆಸುತ್ತಿದ್ದರು. ಮರಾಠ ಸಮಾಜ ಮುಖಂಡರಾದ ಇವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭಾಲ್ಕಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net