

ಬೀದರ್: ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಅಂಬೇಡ್ಕರ್ ವಾದ) ಸಂಸ್ಥಾಪಕರು, ರಾಜ್ಯದಲ್ಲಿ ದಲಿತ ಚಳುವಳಿಗೆ ನವಶಕ್ತಿ ತುಂಬಿದ ಮಹಾಚೇತನ ಪ್ರೊ.ಬಿ.ಕೃಷ್ಣಪ್ಪ ಅವರ 88ನೇ ಜಯಂತ್ಯುತ್ಸವ ಜೂನ್ 9ರಂದು (ಭಾನುವಾರ) ಬೆಳಿಗ್ಗೆ 11.30ಕ್ಕೆ ಬೆಂಗಳೂರಿನ ಪುರಭವನದಲ್ಲಿ (ಟೌನ್ ಹಾಲ್ ನಲ್ಲಿ) ಆಯೋಜಿಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ, ಹುಮನಾಬಾದ್ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಡಾಕುಳಗಿ ತಿಳಿಸಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ರಾಜ್ಯ ಸಮಿತಿ, ಕರ್ನಾಟಕ ದಲಿತ ಮಹಿಳಾ ಒಕ್ಕೂಟ, ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟದಿಂದ ಕಾರ್ಯಕ್ರಮ ಸಂಘಟಿಸಲಾಗಿದೆ. ಪ್ರೊ.ಕೃಷ್ಣಪ್ಪ ಅವರು ಬದುಕು ಸಂಘರ್ಷದಿಂದ ಕೂಡಿತ್ತು. ಹೀಗಾಗಿ ಅವರ 88ನೇ ಜಯಂತ್ಯುತ್ಸವವನ್ನು "ಸಂಘರ್ಷ ದಿನ" ವನ್ನಾಗಿ ಆಚರಿಸಲಾಗುತ್ತಿದೆ. ಸಮಿತಿ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ನಾಡಿನ ಅನೇಕ ಚಿಂತಕರು, ಗಣ್ಯರು, ಸಾಹಿತಿಗಳು, ಹೋರಾಟಗಾರರು ಪಾಲ್ಗೊಂಡು ಪ್ರೊ.ಬಿ.ಕೃಷ್ಣಪ್ಪ ಅವರ ಹೋರಾಟ, ಜೀವನ-ಸಾಧನೆ ಮೇಲೆ ಮೆಲುಕು ಹಾಕುವ ಜೊತೆಗೆ ದಲಿತ ಚಳವಳಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಲು ಮಾರ್ಗದರ್ಶನ ನೀಡಲಿದ್ದಾರೆ. ದಲಿತ ಬಾಂಧವರು ಬೆಂಗಳೂರು ಚಲೋ ಮೂಲಕ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ರಮೇಶ ಡಾಕುಳಗಿ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.