

ಹುಮನಾಬಾದ್: ಅಶಾಂತಿಯಿಂದ ತತ್ತರಿಸುತ್ತಿರುವ ಬದುಕಿಗೆ ಅಧ್ಯಾತ್ಮದ ಅರಿವು ಅವಶ್ಯಕ ಎಂದು ಬೇಮಳಖೇಡ್-ಗೋಟರ್ಾ ಮಠದ ಶ್ರೀ ಡಾ.ರಾಜಶೇಖರ ಶಿವಾಚಾರ್ಯ ಹೇಳಿದರು.
ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚೀನಕೇರಾ ಕ್ರಾಸ್ ಹತ್ತಿರ ನೂತನವಾಗಿ ನಿರ್ಮಿಸಿರುವ ಶ್ರೀ ನಂದಿಬೆಟ್ಟ ರೇವಣಸಿದ್ದೇಶ್ವರ ಮಹಾದ್ವಾರವನ್ನು ಉದ್ಘಾಟಿಸಿ ಮಾತನಾಡಿ, ನಡೆ-ನುಡಿ, ಉತ್ತಮ ಸಮಾಜ ರೂಪುಗೊಳ್ಳುವುದು ಅಧ್ಯಾತ್ಮ ಚಿಂತನೆಯಿಂದ ಮಾತ್ರ ಸಾಧ್ಯ. ಈ ಕುರಿತು ಯುವಕರಲ್ಲಿ ಅರಿವು, ಸಾಮಾಜಿಕ ಪ್ರಜ್ಞೆ ಮೂಡಿಸಬೇಕು ಎಂದರು.
ಇಂದಿನ ಯುವ ಸಮೂಹದಲ್ಲಿ ಸಂಸ್ಕೃತಿ, ಸಂಸ್ಕಾರದ ಅರಿವು ಇಲ್ಲದಿರುವುದು ಆತಂಕಕಾರಿ. ಶಿಕ್ಷಣಕ್ಕೆ ನೀಡುತ್ತಿರುವ ಆದ್ಯತೆಯಂತೆ ಸಂಸ್ಕಾರಕ್ಕೂ ನೀಡಬೇಕು ಎಂದು ಹೇಳಿದರು.
ಶ್ರೀ ಜಗದ್ಗುರು ರೇವಣಸಿದ್ದೇಶ್ವರರು ಕ್ರಿ.ಶ.11ನೇ ಶತಮಾನದಲ್ಲಿ ಬಸವಕಲ್ಯಾಣದಿಂದ ಕೊಲ್ಲಿಪಾಕಿಗೆ ಧರ್ಮ ಸಂಚಾರ ಕೈಗೊಂಡ ಸಂದರ್ಭದಲ್ಲಿ ನಂದಿಬೆಟ್ಟದ ಮೂಲಕ ತೆರಳಿದ್ದರು ಎಂದು ಇತಿಹಾಸ ಹೇಳುತ್ತದೆ. ಈ ಪುಣ್ಯ ಕ್ಷೇತ್ರದಲ್ಲಿ ಕೆಲ ವರ್ಷಗಳ ಹಿಂದೆ ದೇವಸ್ಥಾನ ನಿರ್ಮಾಣವಾಗಿದೆ ಎಂದರು.
ಚೀನಕೇರಾ ಕ್ರಾಸ್ನಲ್ಲಿ ಮಹಾದ್ವಾರ ನಿರ್ಮಾಣ ಮಾಡಬೇಕೆಂದು ಎರಡು ವರ್ಷಗಳ ಹಿಂದೆ ನೀಡಿದ ಕರೆಗೆ ಸ್ಪಂದಿಸಿದ ಭಕ್ತರು ಇದೀಗ ನಿರ್ಮಿಸಿದ್ದಾರೆ. ಮಹಾದ್ವಾರಗಳು ಪುಣ್ಯಕ್ಷೇತ್ರಗಳ ಗರಿಮೆಯನ್ನು ಹೆಚ್ಚಿಸುವ ಪ್ರತೀಕ ಎಂದು ತಿಳಿಸಿದರು.
ಮಹಾದ್ವಾರದ ರೂವಾರಿ ಬಸಯ್ಯ ಸ್ವಾಮಿ, ದೇವಸ್ಥಾನ ಕಮಿಟಿ ಅಧ್ಯಕ್ಷ ಶಿವಯ್ಯ ಸ್ವಾಮಿ ಮಾತನಾಡಿದರು. ಪ್ರಮುಖರಾದ ಚಂದ್ರಕಾಂತ ಸ್ವಾಮಿ ಚಂದನಹಳ್ಳಿ, ಪೀರಪ್ಪ ಕಿಣಗಿ, ದಯಾನಂದ ಸ್ವಾಮಿ, ಕಮಲಾಕರ ಬಿರಾದಾರ್, ಪರಮೇಶ್ವರ ಬಿರಾದಾರ್, ರಾಜು ಪತ್ರಿ, ಬಸವರಾಜ ಬಿರಾದಾರ್, ಹಣುಮಂತ ಪಾಂಚಾಳ ಇತರರಿದ್ದರು.