ನುಡಿದಂತೆ ನಡೆದ ಕೇಂದ್ರ ಸಚಿವ ಖೂಬಾ

Deepak Patil
Published on

ಬೀದರ್: ವಿಧಾನಸಭೆಯಿಂದ ರಾಜ್ಯ ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯನ್ನಾಗಿ ಜಿಲ್ಲೆಯ ಮರಾಠ ಸಮಾಜದ ಹಿರಿಯ ಮುಖಂಡ ಮಾರುತಿರಾವ್ ಮುಳೆ ಅವರನ್ನು ಆಯ್ಕೆ ಮಾಡಲಾಗಿದ್ದು, ಕೇಂದ್ರ ಸಚಿವ ಭಗವಂತ ಖೂಬಾ ನುಡಿದಂತೆ ನಡೆದಿದ್ದಾರೆ.
ಲೋಕಸಭೆ ಚುನಾವಣೆಗೆ ಮುನ್ನ ನಡೆದಿದ್ದ ಮರಾಠ ಸಮಾಜದ ಮುಖಂಡರ ಸಭೆಯಲ್ಲಿ ಖೂಬಾ ಅವರು ಸಮಾಜದ ಮುಖಂಡರೊಬ್ಬರಿಗೆ ವಿಧಾನ ಪರಿಷತ್ತಿನಲ್ಲಿ ಸ್ಥಾನ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದರು. ಕೆಲವೇ ತಿಂಗಳಲ್ಲಿ ಅದನ್ನು ಈಡೇರಿಸಿದ್ದಾರೆ ಎಂದು ಮರಾಠ ಸಮಾಜದ ಮುಖಂಡ ದೀಪಕ್ ಪಾಟೀಲ ಚಾಂದೋರಿ ತಿಳಿಸಿದ್ದಾರೆ.
ವೈಯಕ್ತಿಕ ಸ್ವಾರ್ಥಕ್ಕಾಗಿ ಸಮಾಜದ ಕೆಲವರು ಬೇರೆ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕೇಂದ್ರ ಸಚಿವರ ಭರವಸೆ ಬಗ್ಗೆ ಲಘುವಾಗಿ ಮಾತನಾಡಿದ್ದರು. ಅಂಥವರ ಮಾತನ್ನು ಲೆಕ್ಕಿಸದೆ ಖೂಬಾ ಅವರು ತಾವು ಕೊಟ್ಟ ಮಾತನ್ನು ನಡೆಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಖೂಬಾ ಅವರಿಗೆ ಮರಾಠ ಸಮಾಜದ ಬಗ್ಗೆ ವಿಶೇಷ ಕಾಳಜಿ ಇದೆ. ರಾಜ್ಯದಲ್ಲಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ವಿಧಾನ ಪರಿಷತ್ತಿನಲ್ಲೂ ಸಮಾಜದ ಮುಖಂಡರಿಗೆ ಸ್ಥಾನ ದೊರಕಿಸಿಕೊಟ್ಟಿದ್ದಾರೆ. ಮರಾಠ ಸಮಾಜ ಸಹ ಖೂಬಾ ಅವರನ್ನು ಬೆಂಬಲಿಸುತ್ತ ಬಂದಿದೆ. ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲೂ ಅವರ ಕೈಹಿಡಿದಿದೆ ಎಂದು ತಿಳಿಸಿದ್ದಾರೆ.
ಸಮಾಜ ಪರ ಕಾಳಜಿಯಿಂದ ಮರಾಠ ಸಮಾಜದಲ್ಲಿ ಖೂಬಾ ಅವರ ಗೌರವ ಇನ್ನಷ್ಟು ಹೆಚ್ಚಿದೆ. ಬರುವ ದಿನಗಳಲ್ಲಿ ಸಮಾಜದ ಮುಖಂಡರ ಸಭೆ ಕರೆದು, ಖೂಬಾ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net