ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ

abvp protest
Published on

ಬೀದರ್: ಇಲ್ಲಿನ ಗುರುನಾನಕ್ ದೇವ್ (ಜಿಎನ್.ಡಿ) ಇಂಜಿನಿಯರಿಂಗ್ ಕಾಲೇಜಿನಲ್ಲಿ ಇ-ಫೆಸ್ಟ್ ಕಾರ್ಯಕ್ರಮ ವೇಳೆ ವಿದ್ಯಾರ್ಥಿಗಳು ಜೈಶ್ರೀರಾಮ ಹಾಡಿಗೆ ನೃತ್ಯ ಮಾಡುತ್ತಿರುವಾಗ ಅನ್ಯಕೋಮಿನ ವಿದ್ಯಾರ್ಥಿಗಳು ಏಕಾಏಕಿ ಧಾವಿಸಿ ಹಲ್ಲೆ ನಡೆಸಿರುವುದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜಿಲ್ಲಾ ಘಟಕದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದ ವಿದ್ಯಾರ್ಥಿಗಳು, ಕಾಲೇಜು ಆವರಣದಲ್ಲಿ ಎಲ್ಲ ವಿದ್ಯಾರ್ಥಿಗಳು ಭಾವೈಕ್ಯದಿಂದ ಇರಬೇಕು. ಆದರೆ ಇಲ್ಲಿ ಇಂಥ ಘಟನೆ ಪದೇಪದೆ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಕಾಲೇಜು ಆಡಳಿತ ಮಂಡಳಿ ಮತ್ತು ಪೊಲೀಸರು ತಪ್ಪಿತಸ್ಥರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಂಡು ಎಂದಿನಂತೆ ಶಾಂತಿಯುತ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಹಿರಿಯ ಮುಖಂಡ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಜಿಎನ್.ಡಿ ಕಾಲೇಜು ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡುತ್ತಿದೆ. ಆದರೆ ಕೆಲ ಕೀಡಿಗೇಡಿಗಳಿಂದ ಕೆಟ್ಟ ಹೆಸರು ತರಲು ಮತ್ತು ಅಲ್ಲಿ ಓದುತ್ತಿರುವ ಹಿಂದು ವಿದ್ಯಾರ್ಥಿಗಳ ಮೇಲೆ ಹಲ್ಲೆಯಂಥ ವಿದ್ಯಮಾನ ನಡೆಯುತ್ತಿರುವುದು ಸರಿಯಲ್ಲ. ಜಿಲ್ಲಾಡಳಿತ ಯಾರ ಒತ್ತಡಕ್ಕೂ ಮಣಿಯದೆ ತಪ್ಪು ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ, ನ್ಯಾಯವಾದಿ ಗುರುನಾಥ ರಾಜಗೀರಾ ಮಾತನಾಡಿ, ಘಟನೆ ನಡೆದ ತಕ್ಷಣ ಗಾಂಧಿಗಂಜ್ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ನಿಭಾಯಿಸಿ ವಿದ್ಯಾರ್ಥಿಗಳಿಗೆ ಗಾಯವಾಗಿದ್ದನ್ನು ನೋಡಿದ್ದಾರೆ. ಆದರೆ ಹಲ್ಲೆ ಮಾಡಿದವರೇ ರಾತ್ರಿ ಠಾಣೆಗೆ ಬಂದು ನಮ್ಮ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಎಲ್ಲ ಗೊತ್ತಿದ್ದ ಪೊಲೀಸರು ತಪ್ಪಿತಸ್ಥರಲ್ಲದ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು ತಪ್ಪು. ಜಿಲ್ಲಾಡಳಿತ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ರಕ್ತ ಬರುವಂತೆ ಹಲ್ಲೆಗೈದವರೇ ನಮ್ಮ ಮೇಲೆ ಹಲ್ಲೆಯಾಗಿದೆ ಎಂದು ಪ್ರಕರಣ ದಾಖಲಿಸುತ್ತಾರೆ ಎಂದರೆ ಏನರ್ಥ? ಇದರ ಹಿಂದೆ ಯಾರದೋ ಒತ್ತಡ ಇದ್ದಂತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಇಂಥ ಘಟನೆಗಳು ರಾಜಾರೋಷವಾಗಿ ನಡೆಯುತ್ತಿವೆ. ಕಾನೂನು ಸುವ್ಯವಸ್ಥೆ ಕೆಟ್ಟು ಹೋಗಿದೆ. ಪೊಲೀಸರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.
ಹಲ್ಲೆಗೆ ಒಳಗಾದ ವಿದ್ಯಾಥರ್ಿ ನಟರಾಜ ಮಾತನಾಡಿದರು. ಎಬಿವಿಪಿ ಜಿಲ್ಲಾ ಸಂಚಾಲಕ ಶಶಿಕಾಂತ ರಾಕಲೆ, ಕಾರ್ಯದರ್ಶಿ ಎ.ಹೇಮಂತ, ಪ್ರಮುಖರಾದ ವೀರೇಶ ಸ್ವಾಮಿ, ಸಾಯಿನಾಥ ಮಂಗಲಗಿ, ಅಂಬರೀಶ್ ಬಿರಾದಾರ್, ಅಮರ ಸ್ವಾಮಿ, ನಾಗರಾಜ, ಪವನ್, ನಟರಾಜ, ಸಾಯಿನಾಥ, ಶರಣು ಬಿರಾದಾರ್, ದಿನೇಶ ಮೂಲಗೆ, ವಿಶಾಲ ಬಾದಾಮಿ, ವಿನಾಯಕ, ಆಕಾಶ ಗ್ಯಾನಪ್ಪನೋರ್, ಬಸವರಾಜ ಗುಮ್ಮಾ ಇತರರಿದ್ದರು.

ಎಲ್ಲೆಡೆ ಪೊಲೀಸ್ ಬಂದೋಬಸ್ತ್
ಜಿಎನ್.ಡಿ ಕಾಲೇಜಿನಲ್ಲಿ ಜೈಶ್ರೀರಾಮ ಹಾಡಿನ ವಿಷಯಕ್ಕೆ ಹಿಂದು-ಮುಸ್ಲಿಂ ವಿದ್ಯಾರ್ಥಿಗಳ ನಡುವೆ ಬುಧವಾರ ನಡೆದ ಗಲಾಟೆ ಸಂಬಂಧ ಪೊಲೀಸರು ಬೀದರ್ ನಗರಾದ್ಯಂತ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಗುರುವಾರ, ಶುಕ್ರವಾರ ಕಾಲೇಜಿನಲ್ಲಿ ನಡೆಯಬೇಕಿದ್ದ ವಾರ್ಷಿಕ ಫೆಸ್ಟ್ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಇನ್ನು ಮೈಲೂರು ಕ್ರಾಸ್, ಅಂಬೇಡ್ಕರ್ ವೃತ್ತ, ಓಲ್ಡ್ ಸಿಟಿಯ ವಿವಿಧೆಡೆ ಪೊಲೀಸರನ್ನು ನಿಯೋಜಿಸಲಾಗಿದೆ. ಎರಡೂ ಕಡೆಯವರು ನೀಡಿದ ದೂರು-ಪ್ರತಿ ದೂರು ಆಧರಿಸಿ ಗಾಂಧಿಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net