

ಬೀದರ್: ನಗರದ ಬಸವನಗರ ಕಾಲೊನಿಯ ಶ್ರೀ ದತ್ತಗಿರಿ ಮಹಾರಾಜ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ, ಸಿಬಿಎಸ್‍ಇ ಹತ್ತನೇ, ಎಸ್‍ಎಸ್‍ಎಲ್‍ಸಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪರೀಕ್ಷೆಯಲ್ಲಿ ಸಾಧನೆಗೈದ ಸಂಸ್ಥೆಯ ಸಂಚಾಲಿತ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಸನ್ಮಾನಿಸಲಾಯಿತು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 94 ರಷ್ಟು ಅಂಕ ಪಡೆದ ಕೆ. ರಶ್ಮಿ ರವೀಂದ್ರ, ಸಿಬಿಎಸ್‍ಇ ಹತ್ತನೇ ಪರೀಕ್ಷೆಯಲ್ಲಿ ಶೇ 95 ರಷ್ಟು ಅಂಕ ಗಳಿಸಿದ ನರೇಶ ಮಲ್ಲಿಕಾರ್ಜುನ, ಎಸ್‍ಎಸ್‍ಎಲ್‍ಸಿ ಕನ್ನಡ ಮಾಧ್ಯಮ ಪರೀಕ್ಷೆಯಲ್ಲಿ ಶೇ 95 ರಷ್ಟು ಅಂಕ ಪಡೆದ ಶ್ರೀಕರಿ ಜೋಶಿ ರಾಮ ಜೋಶಿ ಹಾಗೂ ಆಂಗ್ಲ ಮಾಧ್ಯಮ ಪರೀಕ್ಷೆಯಲ್ಲಿ ಶೇ 91 ರಷ್ಟು ಅಂಕ ಗಳಿಸಿದ ಓಂಸಾಯಿ ವಿನೋದಕುಮಾರ ಅವರನ್ನು ಶಾಲು ಹೊದಿಸಿ, ಹೂಮಾಲೆ ಹಾಕಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಶೇ 80ಕ್ಕೂ ಅಧಿಕ ಅಂಕ ಪಡೆದ ಒಟ್ಟು 45 ವಿದ್ಯಾರ್ಥಿಗಳನ್ನು ಸತ್ಕರಿಸಿ ಪ್ರೋತ್ಸಾಹಿಸಲಾಯಿತು.
ಸಂಸ್ಥೆಯ ಕಾರ್ಯದರ್ಶಿ ಶಿವರಾಜ ಪಾಟೀಲ ಮಾತನಾಡಿ, ಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಗುಣಮಟ್ಟದ ಶಿಕ್ಷಣ ಕೊಡಲಾಗುತ್ತಿದೆ. ಅದರ ಫಲವಾಗಿ ವಿವಿಧ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರುತ್ತಿದ್ದಾರೆ ಎಂದು ಹೇಳಿದರು.
ಶ್ರೀ ದತ್ತಗಿರಿ ಮಹಾರಾಜ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪೂಜ್ಯ ಅವಧೂತಗಿರಿ ಮಹಾರಾಜ, ಡಾ. ಮಹಾಂತ ಸಿದ್ಧೇಶ್ವರ ಆನಂದಗಿರಿ ಮಹಾರಾಜ ಸಾನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಹತ್ತಿ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಉಪಾಧ್ಯಕ್ಷ ರಮೇಶ ಜಿ. ದುಕಾನದಾರ್, ಜಂಟಿ ಕಾರ್ಯದರ್ಶಿ ಸಾಯಿರಾಮ ಅಲ್ಲಾಡಿ, ಖಜಾಂಚಿ ಪ್ರಭಾಕರ ಮೈಲಾಪುರೆ, ಸದಸ್ಯರಾದ ಶಾಂತಾಬಾಯಿ ಯರಮಲ್ಲಿ, ರವಿ ಮಲಸಾ, ಬಸವರಾಜ ದೇಗಮಲಡಿ, ಪ್ರಾಚಾರ್ಯರಾದ ಮಹಾದೇವಿ ಬೀದೆ, ಧನರಾಜ ಖಾಜಾಪುರೆ, ರೂಪಾ ಜೋಶಿ, ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.