

ಬೀದರ್: ವಿಧಾನ ಪರಿಷತ್ನ ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಅಮರನಾಥ ಪಾಟೀಲ್ ಪರ ಕೇಂದ್ರ ಸಚಿವ ಭಗವಂತ ಖೂಬಾ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು.
ಲಿಂಗರಾಜ ಅಪ್ಪ ಇಂಜಿನಿಯರಿಂಗ್ ಕಾಲೇಜು ಹಾಗೂ ವಿವಿಧೆಡೆ ಕರಪತ್ರ ವಿತರಿಸಿ ಮತಯಾಚಿಸಿದ ಅವರು, ಅಮರನಾಥ ಪಾಟೀಲ್ ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಪದವೀಧರರು ತಮ್ಮ ಬಳಿ ಏನೇ ಸಮಸ್ಯೆಗಳನ್ನು ತೆಗೆದುಕೊಂಡು ಬಂದರೂ ಪರಿಹರಿಸಿದ್ದಾರೆ ಎಂದರು.
ಪಾಟೀಲ್ ಹೋರಾಟದ ಹಿನ್ನೆಲೆಯಿಂದ ಬಂದವರು. ಪದವೀಧರರ ಸಮಸ್ಯೆಗಳನ್ನು ಅರಿತಿದ್ದಾರೆ. ಹೀಗಾಗಿ ಮತದಾರರು ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕು. ಕ್ಷೇತ್ರದ ಹಾಲಿ ಸದಸ್ಯರಿಂದ ಮತದಾರರು ನಿರಾಶರಾಗಿದ್ದಾರೆ ಎಂದು ಹೇಳಿದರು.
ಚುನಾವಣೆ ಬೀದರ್ ಕ್ಷೇತ್ರದ ಬಿಜೆಪಿ ಉಸ್ತುವಾರಿ ರೇವಣಸಿದ್ದಪ್ಪ ಜಲಾದೆ ಮಾತನಾಡಿದರು. ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ, ಬೀದರ್ ನಗರ ಘಟಕದ ಅಧ್ಯಕ್ಷ ಶಶಿಧರ ಹೊಸಳ್ಳಿ, ಗುರುನಾಥ ರಾಜಗೀರಾ, ವೀರೇಶ ಸ್ವಾಮಿ, ಶಿವಕುಮಾರ ಭಾಲ್ಕೆ, ವಿನೋದ ಪಾಟೀಲ್ ಇತರರಿದ್ದರು.