

ಬೀದರ್: ಪೂಜ್ಯ ಡಾ.ಅಕ್ಕ ಅನ್ನಪೂರ್ಣ ತಾಯಿಗೆ ವಚನಗಳೇ ಜೀವಾಳವಾಗಿದ್ದವು. ಅಂತೆಯೇ ವಚನಗಳ ಸಂರಕ್ಷಣೆ ದಿನವನ್ನು ವಚನ ವಿಜಯೋತ್ಸವವಾಗಿ ನಡೆಸುತ್ತಿದ್ದರು ಎಂದು ಶ್ರೀ ಬಸವೇಶ್ವರ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ರಮೇಶ ಮಠಪತಿ ಹೇಳಿದರು.
ನಗರದ ದೇವಿ ಕಾಲನಿಯ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಬ್ಯಾಂಕ್ನಲ್ಲಿ ಏರ್ಪಡಿಸಿದ್ದ ಲಿಂಗಾಯತ ಮಹಾ ಮಠದ ಪೂಜ್ಯ ಡಾ.ಅಕ್ಕ ಅನ್ನಪೂರ್ಣ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಅಕ್ಕ ವಚನಗಳಿಗೆ ಪರಮೋಚ್ಛ ಗೌರವ ಸಲ್ಲಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು. ಪ್ರತಿದಿನ ಐದು ವಚನ ಕಡ್ಡಾಯ ಓದಬೇಕೆಂಬ ನಿಯಮ ಜಾರಿಗೆ ತಂದರು. ಇದರಿಂದ ಮನೆ ಮನೆಯಲ್ಲಿ ವಚನಗಳ ಓದು ಆರಂಭವಾಯಿತು. ಹಳ್ಳಿ-ಪಟ್ಟಣಗಳೆನ್ನದೆ ಓಡಾಡಿ ಬಸವ ತತ್ವ ಕುರಿತು ಪ್ರವಚನ ಮಾಡಿ ಬಸವಾದಿ ಶರಣರ ತತ್ವಗಳ ಪ್ರಸಾರಗೈದರು ಎಂದು ಸ್ಮರಿಸಿದರು.
ಅಕ್ಕನವರ ಬಸವ ತತ್ವ ಪ್ರಚಾರ ಕಾರ್ಯಕ್ಕೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸೇರಿ ಅನೇಕ ಪದವಿ-ಪುರಸ್ಕಾರಗಳು ಸಂದಿವೆ. ಅಕ್ಕ ಲಿಂಗೈಕ್ಯರಾಗಿದ್ದರಿಂದ ಶರಣ ಲೋಕದಲ್ಲಿ ಶೂನ್ಯ ಆವರಿಸಿದಂತಾಗಿದೆ ಎಂದರು.
ಚಿಂತಕ ಮಾಣಿಕಪ್ಪ ಗೋರನಾಳೆ ಮಾತನಾಡಿ, ಪೂಜ್ಯ ಡಾ.ಅಕ್ಕ ಅನ್ನಪೂರ್ಣ ಮೊದಲು ಶಿಕ್ಷಕಿಯಾಗಿದ್ದರು. ನಂತರ ಶಿಕ್ಷಕ ಹುದ್ದೆ ತ್ಯಜಿಸಿ ಸಮಾಜೋಧಾರ್ಮಿಕ ಸೇವೆಗೆ ಸಮರ್ಪಿಸಿಕೊಂಡಿದ್ದರು. ತಮ್ಮ ಕಾರ್ಯಗಳಿಂದ ಬೀದರ್ ಜಿಲ್ಲೆಗೆ ಕೀರ್ತಿ ತಂದಿದ್ದರು.
ನಿವೃತ್ತ ಇಂಜಿನಿಯರ್ ಸಿದ್ಧಯ್ಯ ಕಾವಡಿ ಮಾತನಾಡಿದರು. ಬ್ಯಾಂಕ್ ನಿರ್ದೇಶಕ ಓಂಕಾರ ಪಾಟೀಲ್, ಉದಯಕುಮಾರ ಲದ್ದೆ, ಸಿ.ಎಸ್. ಗಣಾಚಾರಿ, ಬ್ಯಾಂಕ್ ವ್ಯವಸ್ಥಾಪಕ ಜಗದೀಶ್ ಮೋಳಕೇರಿ ಇತರರಿದ್ದರು.