

ಬೀದರ್: ಈ ಹಿಂದೆ ಒಂದು ಅವಧಿಗೆ ಎಂಎಲ್ಸಿಯಾಗಿದ್ದ ಅಮರನಾಥ ಪಾಟೀಲ್ ಉತ್ತಮ ಕಾರ್ಯನಿರ್ವಹಿಸಿ ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಮತ್ತೊಂದು ಅವಗೆ ಅವರಿಗೆ ಬೆಂಬಲಿಸಬೇಕು ಎಂದು ಶಾಸಕ, ಮಾಜಿ ಸಚಿವ ಎಸ್. ಸುರೇಶಕುಮಾರ್ ಹೇಳಿದರು.
ವಿಧಾನ ಪರಿಷತ್ನ ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಅಮರನಾಥ ಪಾಟೀಲ್ ಪರ ನಗರದ ನ್ಯಾಯಾಲಯ ಸಂಕೀರ್ಣದಲ್ಲಿರುವ ಜಿಲ್ಲಾ ವಕೀಲರ ಸಂಘದಲ್ಲಿ ಪ್ರಚಾರ ನಡೆಸಿ ಮತಯಾಚಿಸಿದ ಅವರು, ಮೇಲ್ಮನೆ ಘನತೆ, ಗೌರವ ಕಾಪಾಡುವ ಬಹುದೊಡ್ಡ ಜವಾಬ್ದಾರಿ ಮತದಾರರ ಮೇಲಿದೆ. ಮೇಲ್ಮನೆ ಗೌರವ ಕಾಪಾಡಬೇಕಾದರೆ ಉತ್ತಮ ಅಭ್ಯಥರ್ಿ ಪಾಟೀಲ್ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಈಚೆಗೆ ಮೇಲ್ಮನೆ ಸಿರಿವಂತರ ಮನೆಯಾಗಿ ಮಾರ್ಪಡುತ್ತಿರುವುದು ವಿಷಾದನೀಯ. ಹಣ ಖರ್ಚು ಮಾಡಿ ಮೇಲ್ಮನೆ ಪ್ರವೇಶಿಸಿದರೆ ಜನರ ಸಮಸ್ಯೆಗಳಿಗೆ ಸ್ಪಂದನೆ ಸಿಗುವುದಿಲ್ಲ. ಹೀಗಾಗಿ ಪದವೀಧರರು, ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವ ಅಮರನಾಥ ಪಾಟೀಲ್ ಅವರನ್ನು ಬೆಂಬಲಿಸುವ ಅಗತ್ಯವಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿ, ಚುನಾವಣೆ ನಂತರವೂ ಜನರಿಗೆ ಸುಲಭವಾಗಿ ಸಿಗುವ ಮತ್ತು ಪದವೀಧರರ ಸಮಸ್ಯೆಗೆ ಸ್ಪಂದಿಸುವಂಥ ಸರಳ ವ್ಯಕ್ತಿ ಅಮರನಾಥ ಪಾಟೀಲ್ ಅವರನ್ನು ಗೆಲ್ಲಿಸಬೇಕು ಎಂದು ಕೋರಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪುಟ್ಟು ಪಾಟೀಲ್ ಮಾತನಾಡಿ, ಪ್ರತಿವರ್ಷ ವಕೀಲರ ಸಂಘಕ್ಕೆ ಸರಿಯಾಗಿ ಅನುದಾನ ಸಿಗುತ್ತಿಲ್ಲ. ಯುವ ವಕೀಲರ ಗೌರವಧನವನ್ನು ಸರ್ಕಾರದಿಂದ ತಡೆಹಿಡಿಯಲಾಗಿದೆ. ಈ ಸೌಲಭ್ಯವನ್ನು ಶೀಘ್ರದಲ್ಲಿ ಜಾರಿಗೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ರಘುನಾಥರಾವ ಮಲ್ಕಾಪುರೆ ಮಾತನಾಡಿ, ಅಮರನಾಥ ಪಾಟೀಲ್ 371(ಜೆ) ಜಾರಿಗಾಗಿ ವಿಧಾನ ಪರಿಷತ್ ನಲ್ಲಿ ಸಾಕಷ್ಟು ಹೋರಾಟ ಮಾಡಿ ಈಶಾನ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುವ ಬಿಜೆಪಿ ಅಭ್ಯರ್ಥಿ ಪಾಟೀಲ್ ಗೆ ಬೆಂಬಲಿಸಬೇಕು ಎಂದರು.
ಚುನಾವಣೆ ಉಸ್ತುವಾರಿ ಬಾಬು ವಾಲಿ, ಬಿಜೆಪಿ ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್, ಪ್ರಮುಖರಾದ ಶಶಿಧರ ಹೊಸಳ್ಳಿ, ಪೀರಪ್ಪ ಔರಾದೆ, ಕಿರಣ ಪಾಟೀಲ್, ಗುರುನಾಥ ಜ್ಯಾಂತಿಕರ್, ಜಯಕುಮಾರ ಕಾಂಗೆ, ಗುರುನಾಥ ರಾಜಗೀರಾ ಇತರರಿದ್ದರು.