

ಬೀದರ್: ಔರಾದ್ ತಾಲೂಕಿನ ಎಕಂಬಾ ಗ್ರಾಮದಲ್ಲಿ ಮೇ 28ರಂದು ಸಂಜೆ 6ಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಮೂರ್ತಿ ಅನಾವರಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮ ಆಯೋಜನೆ ಸಮಿತಿಯ ಪೃಥ್ವಿರಾಜ ಪಾಟೀಲ್ ಹೇಳಿದರು.
ಮೂರ್ತಿ ಅನಾವರಣ ನಿಮಿತ್ತ ಗ್ರಾಮದಲ್ಲಿ ಶುಚಿ ಕಾರ್ಯ ಆರಂಭಿಸಲಾಗಿದೆ. ಜಾತಿ, ಮತ, ಪಂಥ ಎನ್ನದೆ ಎಲ್ಲ ವರ್ಗದ ಜನರು ಒಗ್ಗೂಡಿ ಸಮಾರಂಭ ಆಯೋಜಿಸಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶನಿವಾರ ನಡೆದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರದಲ್ಲಿ 100 ಯುವಕರು ರಕ್ತದಾನ ಮಾಡಿದ್ದಾರೆ. ಭಾನುವಾರ ಸಂಜೆ ಆಧಿನಾಥ ಮಹಾರಾಜ ಅವರಿಂದ ಕೀರ್ತನೆ, 27ರಂದು ಶಿವಶಾಹೀರ ರಾಜೇಂದ್ರ ಖಡುಸಕರ್ ಹಾಗೂ ಅವಿನಾಶ ಭಾರತಿ ಅವರಿಂದ ವಿಶೇಷ ಉಪನ್ಯಾಸ ಜರುಗಲಿದೆ ಎಂದರು.
ಮೇ 28ರಂದು ಸಂಜೆ 6ಕ್ಕೆ ಶಿವಾಜಿ ಮಹಾರಾಜರ 13ನೇ ವಂಶಸ್ಥರಾದ ಯುವರಾಜ ಸಂಬಾಜಿರಾಜೆ ಮೂರ್ತಿ ಅನಾವರಣ ಮಾಡುವರು. ಬೆಂಗಳೂರಿನ ಶ್ರೀ ಮಂಜುನಾಥ ಸ್ವಾಮೀಜಿ, ಶ್ರೀಕರ್ಣ ಗಜೇಂದ್ರ ಮಹಾರಾಜ ಹಾಗೂ ಗ್ರಾಪಂ ಅಧ್ಯಕ್ಷೆ ತುಳಸಾಬಾಯಿ ನಾಮದೇವ ಜಾಧವ್ ಇತರರು ಪಾಲ್ಗೊಳ್ಳುವರು. ಶಿವಾಜಿ ಮಹಾರಾಜರು ಎಲ್ಲ ಜಾತಿ, ಜನಾಂಗದವರಿಗೆ ಆಶ್ರಯ ನೀಡಿದ ದೊರೆ. ಹೀಗಾಗಿ ಅವರ ಮೂರ್ತಿ ಅನಾವರಣದ ಅದ್ದೂರಿ ಕಾರ್ಯಕ್ರಮಕ್ಕೆ ಎಲ್ಲ ಸಮುದಾಯದವರು ಆಗಮಿಸಬೇಕು ಎಂದು ಕೋರಿದರು.
ಪ್ರಮುಖರಾದ ಅಕ್ಷಯ ಪಾಟೀಲ್, ಸತೀಶ ವಾಸರೆ, ಡಾ.ಅಮಿತ್ ಹಂಗರಗೆ, ಗುಂಡಾಜಿ ಪಾಟೀಲ್, ಧನರಾಜ ಪಾಟೀಲ್, ಲಕ್ಷ್ಮಣ ಉಪಾಸೆ, ಸಂದೀಪ ನೇಳಗೆ ಇತರರಿದ್ದರು.