ಬದುಕಿಗೆ ವಚನಗಳು ದಾರಿದೀಪ

Hippalgon
Published on

ಬೀದರ್: ವಿಶ್ವಗುರು ಬಸವಣ್ಣ ಹಾಗೂ ಶರಣರು ರಚಿಸಿದ ವಚನಗಳು ಮಾನವ ಕುಲದ ದಾರಿದೀಪಗಳಾಗಿವೆ. ನಮ್ಮ ಜೀವನದ ಎಲ್ಲ ಸಮಸ್ಯೆಗಳಿಗೂ ವಚನದಲ್ಲಿ ಸೂಕ್ತ ಪರಿಹಾರವಿದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಬಸವ ಬಳಗ ಮತ್ತು ಅಕ್ಕನ ಬಳಗದ ಸಹಯೋಗದಡಿ ಹಿಪ್ಪಳಗಾಂವ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಮೂರ್ತಿ ಅನಾವರಣಗೊಳಿಸಿ ಮಾತನಾಡಿದ ಅವರು, ವಚನಗಳನ್ನು ಪಚನ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ವಚನಗಳಲ್ಲಿ ಬದುಕಿನ ಸಾರ ಇದೆ. ನಿತ್ಯ ವಚನ ಪಠಣ ಮತ್ತು ಅನುಷ್ಠಾನದ ಮೂಲಕ ಅವುಗಳನ್ನು ಪ್ರಚುರಪಡಿಸಬೇಕಿದೆ. ಕೇವಲ ಮೂರ್ತಿ ಸ್ಥಾಪಿಸಿದರೆ ಸಾಲದು, ಬಸವಣ್ಣ ಸೇರಿ ಎಲ್ಲ ಶರಣರ ವಚನಗಳ ಅಧ್ಯಯನ ಮಾಡಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ವಚನಗಳನ್ನು ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಕಳಬೇಡ ಕೊಲಬೇಡ ಎಂಬ ಅತ್ಯಂತ ಸರಳವಾದ ವಚನ ಜೀವನದಲ್ಲಿ ಅಳವಡಿಸಿಕೊಂಡು ಸಂತೃಪ್ತ ಬದುಕು ಸಾಗಿಸಬೇಕು ಎಂದು ಹೇಳಿದರು.
ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ ಮಾತನಾಡಿ, ಇಂದು ಎಲ್ಲೆಡೆ ಬಸವ ಬೆಳೆ ಸಮೃದ್ಧವಾಗಿ ಬೆಳೆಯುತ್ತಿದೆ. ಪ್ರತಿ ಹಳ್ಳಿಯಲ್ಲಿ ಬಸವ ಮೂರ್ತಿ ಅನಾವರಣ ಮಾಡಿ ಬಸವ ಸಂಘಟನೆಗಳನ್ನು ಬಲಿಷ್ಠಗೊಳಿಸಬೇಕು ಎಂದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಬಸವ ಸಂಸ್ಕೃತಿ ಬೆಳೆಯಲು ಬಸವೇಶ್ವರ ಮೂರ್ತಿ ಪ್ರೇರಣೆ. ಜಾತೀಯತೆ ಇನ್ನೂ ಇದ್ದು, ಬುಡಸಮೇತ ಕಿತ್ತು ಹಾಕುವ ಅಗತ್ಯವಿದೆ ಎಂದು ಹೇಳಿದರು.
ಜಿಲ್ಲಾ ಬಸವ ಕೇಂದ್ರ ಅಧ್ಯಕ್ಷ ಶರಣಪ್ಪ ಮಿಠಾರೆ ಮಾತನಾಡಿದರು. ಕಸಾಪ ಮಾಜಿ ಜಿಲ್ಲಾಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಅಧ್ಯಕ್ಷತೆ ವಹಿಸಿದ್ದರು. ಐಕ್ಯ ಮಂಟಪವನ್ನು ಹುಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮೀಜಿ ಉದ್ಘಾಟಿಸಿದರು.
ಚಾಂಬೋಳ ರುದ್ರಮುನಿ ಮಠದ ಶ್ರೀ ಮುರಗೇಂದ್ರ ಸ್ವಾಮೀಜಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಲಿಂಗಾಯತ ಸಮಾಜ ಜಿಲ್ಲಾಧ್ಯಕ್ಷ ಕುಶಾಲರಾವ ಪಾಟೀಲ್ ಖಾಜಾಪುರ, ರಾಷ್ಟ್ರೀಯ ಬಸವ ದಳ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ್ ಗಾದಗಿ, ಚಂದ್ರಶೇಖರ ಹೆಬ್ಬಾಳೆ, ಜೈರಾಜ ಖಂಡ್ರೆ, ಫನರ್ಾಂಡೀಸ್ ಹಿಪ್ಪಳಗಾಂವ ಇತರರಿದ್ದರು.
ಸಂಗಪ್ಪ ನಾವದಗೇರೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಚಿನ್ಮಯಿ ನಾವದಗೇರೆ ವಚನ ಪ್ರಾರ್ಥನೆ ನೆರವೇರಿಸಿದರು. ವೈಜಿನಾಥ ಸಜ್ಜನಶೆಟ್ಟಿ ನಿರೂಪಣೆ ಮಾಡಿದರು. ಪ್ರೊ.ರಾಮಶೆಟ್ಟಿ ಬಿರಾದಾರ್ ವಂದಿಸಿದರು.
ಬಸವ ಮೂರ್ತಿ ಅನಾವರಣ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಐದು ದಿವಸ ಬಸವ ದರ್ಶನ ಪ್ರವಚನ ನೀಡಿದ ಸುವರ್ಣಾ ಶರಣಪ್ಪ ಚಿಮಕೋಡೆ ಹಾಗೂ ಮೂರ್ತಿ ದಾಸೋಹಿ ಲಿಂಗಾರತಿ ಅಲ್ಲಮಪ್ರಭು ನಾವದಗೇರೆ ಹಾಗೂ ಸುನಿತಾ ಮಾದಪ್ಪ ಬೆಂಬಳಗೆ ದಂಪತಿಯನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಗ್ರಾಮದ ಬೀದಿಗಳಲ್ಲಿ ಬಸವ ಮೂತರ್ಿಯ ಭವ್ಯ ಮೆರವಣಿಗೆ ನಡೆಯಿತು. ಯುವಕರ ವಚನ ನೃತ್ಯ ಹಾಗೂ ಮಹಿಳೆಯರ ಕೋಲಾಟ ಕಣ್ಮನ ಸೆಳೆಯಿತು.

ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣ ಕಲಿತರೂ ದಿನಬೆಳಗಾದರೆ ಅವ್ಯಾಹತವಾಗಿ ಅಹಿತಕರ ಘಟನೆಗಳು ನಡೆಯುತ್ತಿವೆ. ಇವುಗಳ ಹತೋಟಿಗೆ ಮತ್ತೆ ನಾವು ವಚನ ಸಾಹಿತ್ಯ ಅಧ್ಯಯನದತ್ತ ಗಮನಹರಿಸಬೇಕಿದೆ. ಮಕ್ಕಳಿಗೆ ಶಿಕ್ಷಣದ ಜತೆಯಲ್ಲಿ ಸಂಸ್ಕಾರವೂ ನೀಡಬೇಕು.| ಶ್ರೀ ಶಿವಾನಂದ ಸ್ವಾಮೀಜಿಹುಲಸೂರು

ವಿಶ್ವಕ್ಕೆ ಸಮಾನತೆ ಸಂದೇಶ ಸಾರಿದ ಬಸವಾದಿ ಶರಣರ ವಚನಗಳಲ್ಲಿ ಜೀವನಕ್ಕೆ ಬೇಕಾಗುವ ಮೌಲ್ಯಗಳಿವೆ. ವಚನಗಳನ್ನು ಓದುವ ಮೂಲಕ ಅವುಗಳ ತತ್ವಗಳ ಮಹತ್ವ ಅರಿತು ನಡೆದರೆ ಬದುಕು ಸಾರ್ಥಕವಾಗುತ್ತದೆ.| ಸೂರ್ಯಕಾಂತ ನಾಗಮಾರಪಳ್ಳಿಡಾ.ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net