

ಬೀದರ್: ವಿಧಾನ ಪರಿಷತ್ ಮಾಜಿ ಸಭಾಪತಿ, ಕ್ರೈಸ್ತ ಸಮಾಜದ ಹಿರಿಯ ಮುಖಂಡ ಡೇವಿಡ್ ಸಿಮೆಯೋನ್ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ನೇಮಿಸುವಂತೆ ಕರ್ನಾಟಕ ಕ್ರೈಸ್ತರ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಭಾಸ್ಕರ್ ಬಾಬು ಪಾತರಪಳ್ಳಿ ಆಗ್ರಹಿಸಿದರು.
ಬೀದರ್ ಸೇರಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಕ್ರೈಸ್ತರ ಜನಸಂಖ್ಯೆ ಆರೇಳು ಲಕ್ಷ ಇದೆ. ದೇಶ ಸ್ವಾತಂತ್ರ್ಯದ ನಂತರ ಸಮಾಜದವರು ಕಾಂಗ್ರೆಸ್ ಬೆಂಬಲಿಸುತ್ತ ಬಂದಿದ್ದಾರೆ. ಹೀಗಾಗಿ ಸಿಮೆಯೋನ್ ಅವರಿಗೆ ಈ ಬಾರಿ ಅವಕಾಶ ನೀಡಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಕೋರಿದರು.
ಲೋಕಸಭೆ, ವಿಧಾನಸಭೆ ಸೇರಿ ಪ್ರತಿ ಚುನಾವಣೆಯಲ್ಲಿ ಕ್ರೈಸ್ತರು ಕಾಂಗ್ರೆಸ್ಗೆ ಎಲ್ಲ ರೀತಿಯಿಂದ ಸಹಕಾರ ನೀಡುತ್ತ ಬಂದಿದ್ದಾರೆ. ಆದರೂ ಕಾಂಗ್ರೆಸ್ ಸಮುದಾಯದ ಮತಗಳನ್ನು ಪಡೆದು ನಿರ್ಲಕ್ಷಿಸುತ್ತ ಬಂದಿದೆ. ಪಕ್ಷ ಮತ್ತು ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸದೆ ಇರುವುದು ಸಮುದಾಯಕ್ಕೆ ಮಾಡಿರುವ ಘೋರ ಅನ್ಯಾಯ. ಜಿಪಂ, ತಾಪಂ ಚುನಾವಣೆಯಲ್ಲೂ ಟಿಕೆಟ್ ನೀಡಿಲ್ಲ ಎಂದು ದೂರಿದರು.
1978ರಲ್ಲಿ ಆರ್.ಎಸ್. ಮನೋಹರ ಅವರನ್ನು ಮೇಲ್ಮನೆಗೆ ಕಾಂಗ್ರೆಸ್ ನಾಮಕರಣ ಮಾಡಿದ್ದನ್ನು ಬಿಟ್ಟರೆ ಈವರೆಗೂ ಕಲ್ಯಾಣ ಕರ್ನಾಟಕದ ಕ್ರೈಸ್ತರಿಗೆ ಆದ್ಯತೆ ನೀಡಿಲ್ಲ. ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ಕಕದ ಭಾಗದ ಹಿರಿಯ ರಾಜಕಾರಣಿ ಸಿಮೆಯೋನ್ ಅವರಿಗೆ ಎಂಎಲ್ಸಿ ಸ್ಥಾನ ನೀಡಿ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.
ವೇದಿಕೆ ಜಿಲ್ಲಾಧ್ಯಕ್ಷ ರಾಜೇಶ ಜ್ಯೋತಿ, ಡಾ.ಎಂ.ಎಸ್. ಶಿರೋಮಣಿ, ಮಾಣಿಕ ಕೌಠಾ, ಸುಕೀರ್ತಿ ವಗ್ಗೆ, ಸಂತೋಷ ಸುಂದರ ಇದ್ದರು.