

ಬೀದರ್: ಹುಬ್ಬಳ್ಳಿಯ ವೀರಾಪುರ ಬಡಾವಣೆ ನಿವಾಸಿ ಅಂಜಲಿ ಅಂಬಿಗೇರ ಹತ್ಯೆ ಮಾಡಿದವನಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಜಿಲ್ಲಾ ಟೋಕರಿ ಕೋಲಿ ಸಮಾಜ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಅಂಬೇಡ್ಕರ್ ವೃತ್ತ ಹತ್ತಿರದ ಪ್ರವಾಸಿ ಮಂದಿರದಿಂದ ಭಗತಸಿಂಗ್ ವೃತ್ತ, ಮಹಾವೀರ ಸರ್ಕಲ್, ತಹಸಿಲ್ ಕಚೇರಿ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದ ಪ್ರತಿಭಟನಾಕಾರರು, ಪ್ರೀತಿ ನಿರಾಕರಿಸಿದ್ದಕ್ಕೆ ಅಂಜಲಿ ಕೊಲೆ ಮಾಡಿದವನನ್ನು ಗಲ್ಲಿಗೇರಿಸಿ ಮುಂದೆ ಇಂಥ ಘಟನೆ ಆಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ನೇಹಾ ಹಿರೇಮಠ ಕೊಲೆ ಕೇಸ್ ಮಾಸುವ ಮುನ್ನವೇ ಅಂಜಲಿ ಹತ್ಯೆಯಾಗಿದ್ದು, ಇಡೀ ಸಮಾಜವನ್ನು ಬೆಚ್ಚಿ ಬೀಳಿಸಿದೆ. ಅಂಜಲಿ ಹತ್ಯೆ ಟೋಕರಿ ಕೋಲಿ ಸೇರಿ 37 ಪರ್ಯಾಯ ಪದಗಳಿಂದ ಕರೆಯಲ್ಪಡುವ ಸಮಾಜದ 60 ಲಕ್ಷ ಜನರಲ್ಲಿ ಆತಂಕ ಮೂಡಿಸಿದೆ. ಪದೇಪದೆ ನಮ್ಮ ಸಮುದಾಯದ ಮೇಲೆ ಅನ್ಯಾಯ, ಅತ್ಯಾಚಾರ, ಕೊಲೆ, ಸುಲಿಗೆ, ಶೋಷಣೆಯಂಥ ಹೀನಕೃತ್ಯಗಳು ನಡೆಯುತ್ತಿದ್ದು, ಸಮಾಜಕ್ಕೆ ರಕ್ಷಣೆ ಇಲ್ಲದಂತಾಗಿದೆ ಕಿಡಿಕಾರಿದರು.
ಅಂಜಲಿ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಜತೆಗೆ ಪರಿವಾರದ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು. ಇಂಥ ಘಟನೆ ಮರುಕಳಿಸದಂತೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಲಬುರಗಿ ಜಿಲ್ಲೆಯ ತೊನಸನಳ್ಳಿಯ ಶ್ರೀ ಅಲ್ಲಮಪ್ರಭು ಪೀಠದ ಶ್ರೀ ಮಲ್ಲಣ್ಣಪ್ಪ ಸ್ವಾಮೀಜಿ, ಸಂಘದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದಾರ, ಪ್ರಧಾನ ಕಾರ್ಯದರ್ಶಿ ಪಾಂಡುರಂಗ ಗುರೂಜಿ, ಪ್ರಮುಖರಾದ ಈಶ್ವರಸಿಂಗ್ ಠಾಕೂರ್, ಶಶಿಧರ ಹೊಸಳ್ಳಿ, ಶಾಂತಪ್ಪ ಜಿ.ಪಾಟೀಲ್, ರೇವಣಸಿದ್ದಪ್ಪ ಜಲಾದೆ, ಮಹೇಶ ಪಾಲಂ, ಸುನೀಲ ಭಾವಿಕಟ್ಟಿ, ಮಾರುತಿ ಮಾಸ್ಟರ್, ಈಶ್ವರ ಬೊಕ್ಕೆ, ನಾಗಭೂಷಣ ಸಂಗಮ, ಚಂದ್ರಕಾಂತ ಹಳ್ಳಿಖೇಡಕರ್, ಷನ್ಮುಖಪ್ಪ ಶೇಕಾಪುರ, ಗೋವಿಂದ ಜಾಲಿ, ಶಿವರಾಜ ಜಮಾದಾರ, ಶಿವರಾಜ ಬಂಬುಳಗಿ, ವಿಜಯಕುಮಾರ ಪಾಟೀಲ್, ರಾಜಕುಮಾರ ಜಮಾದಾರ ಪಾಲ್ಗೊಂಡಿದ್ದರು. ಬೇಡಿಕೆ ಸಂಬಂಧ ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.