

ಬೀದರ್: ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ದೇವನೂರ ಗ್ರಾಮದ ಅರ್ಜುನಪ್ಪ ಹಣಮಂತ ಮಡಿವಾಳ ಮೇಲೆ ಹಲ್ಲೆ ನಡೆಸಿ, ಅಮಾನವೀಯ ಕೃತ್ಯ ಎಸಗಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಮಡಿವಾಳ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಇಲ್ಲಿನ ಮಡಿವಾಳ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್ಯಾಲಿ ನಡೆಸಿ, ಅರ್ಜುನಪ್ಪ ಅವರನ್ನು ಮನೆಯಲ್ಲಿ ಕೂಡಿಹಾಕಿ ಮರ್ಮಾಂಗಕ್ಕೆ ಕರೆಂಟ್ ಶಾಕ್ ನೀಡಿ ಕಿರುಕುಳ ನೀಡಲಾಗಿದೆ. ಇದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎರಡು ದಿನ ಕೂಡಿ ಹಾಕಿ ಅನ್ನ, ನೀರು ಕೊಡದೆ ಹಿಂಸೆ ನೀಡಲಾಗಿದೆ. ಈ ಘಟನೆಯಿಂದ ಸಣ್ಣ ಸಮಾಜವಾದ ಮಡಿವಾಳ ಜನರು ಭಯಭೀತರಾಗಿದ್ದಾರೆ. ಈ ಕೃತ್ಯ ಮಾಡಿದವರನ್ನು ಕೂಡಲೇ ಬಂಧಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಂಡು ಅರ್ಜುನಪ್ಪ ಮಡಿವಾಳಗೆ ನ್ಯಾಯ ಒದಗಿಸಿಕೊಡಬೇಕು. ಅವರಿಗೆ ಜೀವ ಬೇದರಿಕೆ ಇರುವ ಕಾರಣ ಪೊಲೀಸ್ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಸಿಎಂ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಸುಭಾಷ ಮಡಿವಾಳ, ಗೌರವ್ಯಾಧ್ಯಕ್ಷ ದಿಗಂಬರ ಮಡಿವಾಳ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಂದಗೂಳ, ಉಪಾಧ್ಯಕ್ಷ ಅಶೋಕ ತೆಲೆಂಗೆ, ಮುಖಂಡರಾದ ಈಶ್ವರಸಿಂಗ್ ಠಾಕೂರ್, ಶಶಿಧರ ಹೊಸಳ್ಳಿ, ಗಣೇಶ ಭೋಸ್ಲೆ, ಮಹೇಶ ಪಾಲಂ, ನಾಗರಾಜ, ಧನರಾಜ ಮಡಿವಾಳ, ಭೀಮಣ್ಣ, ನಾಗಪ್ಪ, ದಿಲೀಪ, ಗಣಪತಿ ಸಸ್ತಾಪುರೆ, ಶಿವಕುಮಾರ ಹುಮನಾಬಾದ್, ಸುಮಿತ್ರಾ ಮಡಿವಾಳ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಗೊಂದೆಗಾಂವಕರ್, ಬಾಬುರಾವ ಕುಂಬಾರ ಇತರರಿದ್ದರು.