

ಬೀದರ್: ಬಿಜೆಪಿ ಮುಖಂಡರು ನಗರದ ವಿವಿಧೆಡೆ ಬುಧವಾರ ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಅಮರನಾಥ ಪಾಟೀಲ ಮತ ಯಾಚಿಸಿದರು.
ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗ್ಲೊಬಲ್ ಸೈನಿಕ ಅಕಾಡೆಮಿ, ಕರ್ನಾಟಕ ಪದವಿ ಕಾಲೇಜಿನಲ್ಲಿ ಮತ ಕೋರಿದರು.
ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಸರಳ, ಸಜ್ಜನ ವ್ಯಕ್ತಿಯಾಗಿದ್ದಾರೆ. ಪದವೀಧರರು ಹಾಗೂ ಶಿಕ್ಷಕರ ಬೇಕು-ಬೇಡಗಳನ್ನು ಅರಿತವರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ ಹೇಳಿದರು.
ಪಾಟೀಲ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿದ್ದಾಗ ಪದವೀಧರರು ಹಾಗೂ ಶಿಕ್ಷಕರ ಅನೇಕ ಸಮಸ್ಯೆಗಳ ಪರಿಹಾರಕ್ಕೆ ವಿಧಾನಸಭೆಯ ಒಳಗೆ ಹಾಗೂ ಹೊರಗೆ ಹೋರಾಟ ನಡೆಸಿದ್ದರು. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಕ್ಷೇತ್ರದ ಹಾಲಿ ಸದಸ್ಯರು ಪದವೀಧರರ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಆರೋಪಿಸಿದರು.
ವಿಧಾನ ಪರಿಷತ್ ಚುನಾವಣೆಯ ಬೀದರ್ ತಾಲ್ಲೂಕು ಉಸ್ತುವಾರಿ ರೇವಣಸಿದ್ದಪ್ಪ ಜಲಾದೆ ಮಾತನಾಡಿದರು.
ಬಿಜೆಪಿಯ ಕಲಬುರಗಿ ವಿಭಾಗ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ್, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಾಬುವಾಲಿ, ಮುಖಂಡರಾದ ಮಹೇಶ ಪಾಲಂ, ಗುರುನಾಥ ರಾಜಗೀರಾ, ಪ್ರೊ. ಎಸ್.ಬಿ. ಸಜ್ಜನಶೆಟ್ಟಿ, ಸಂಗಶೆಟ್ಟಿ ಗಾದಗೆ, ಸುನೀಲ್ ರಾಗ ಇದ್ದರು.