ನೀತಿ ಸಂಹಿತೆ ಮುಕ್ತಾಯ ನಂತರ ಹೋರಾಟ ತೀವ್ರ

Somnath Mudhool - Copy
Published on

ಬೀದರ್: ಲೋಕಸಭೆ ಚುನಾವಣೆ ನೀತಿ ಸಂಹಿತೆ ಮುಕ್ತಾಯಗೊಂಡ ನಂತರ ಜಿಲ್ಲೆಯಲ್ಲಿ ಕನ್ನಡ ನಾಮಫಲಕ ಕಡ್ಡಾಯ ಅಳವಡಿಕೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಎಚ್ಚರಿಕೆ ನೀಡಿದ್ದಾರೆ.
ಜೂನ್ 4ಕ್ಕೆ ನೀತಿ ಸಂಹಿತೆ ಕೊನೆಗೊಳ್ಳಲಿದ್ದು, ಅದರೊಳಗೆ ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಕಡ್ಡಾಯವಾಗಿ ಬಳಸಬೇಕು. ಅನಂತರ ಕಾಣುವ ಅನ್ಯ ಭಾಷೆ ಫಲಕಗಳನ್ನು ಕಿತ್ತೊಗೆಯಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ವೇದಿಕೆ ಕನ್ನಡ ನಾಮಫಲಕ ಅಳವಡಿಕೆಗಾಗಿ ಸಾಕಷ್ಟು ದಿನಗಳಿಂದ ಹೋರಾಟ ನಡೆಸುತ್ತ ಬಂದಿದೆ. ಕಳೆದ ಡಿಸೆಂಬರ್‍ನಲ್ಲಿ ಬೆಂಗಳೂರಿನಲ್ಲಿ ನಡೆಸಿದ ಹೋರಾಟ ರಾಜ್ಯದಾದ್ಯಂತ ಸಂಚಲನ ಮೂಡಿಸಿತು ಎಂದು ತಿಳಿಸಿದ್ದಾರೆ.
ಫೆ. 11 ರಂದು ಬೀದರ್ ನಗರದಲ್ಲಿ ಕನ್ನಡ ನಾಮಫಲಕ ಅಳವಡಿಕೆ ಕುರಿತು ಜನಜಾಗೃತಿ ಅಭಿಯಾನ ನಡೆಸಲಾಗಿತ್ತು. ಮಾ. 5ಕ್ಕೆ ಅನ್ಯಭಾಷೆ ಫಲಕಗಳನ್ನು ಕಿತ್ತು ಬೀಸಾಡಲಾಗಿತ್ತು. ಈ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆಯ ಐವರ ಮೇಲೆ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು ಎಂದು ಹೇಳಿದ್ದಾರೆ.
ಪ್ರತಿಭಟನೆ ನಡೆದು ಎರಡೂವರೆ ತಿಂಗಳಾದರೂ ಬೀದರ್ ನಗರದ ಎಲ್ಲೆಡೆ ಕನ್ನಡ ನಾಮಫಲಕ ಅಳವಡಿಕೆಯಾಗಿಲ್ಲ. ಜಿಲ್ಲಾಡಳಿತ ಹಾಗೂ ನಗರಸಭೆ ಈ ಕಡೆಗೆ ಗಮನ ಹರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net