ಮಹಿಳೆಯರಿಗೆ ಬಸವಕಲ್ಯಾಣ ಉಚಿತ ಪ್ರವಾಸ

Basvakalyan Free Tour - Copy
Published on

ಬೀದರ್: ಬಸವಾದಿ ಶರಣರ ಸ್ಮಾರಕಗಳ ವೀಕ್ಷಣೆಗಾಗಿ ವೀರಶೈವ ಲಿಂಗಾಯತ ನೌಕರರ ಸಂಘದ ಜಿಲ್ಲಾ ಘಟಕವು ವೃದ್ಧ ಮಹಿಳೆಯರನ್ನು ಬಸವಕಲ್ಯಾಣಕ್ಕೆ ಉಚಿತ ಪ್ರವಾಸ ಕರೆದೊಯ್ಯುವ ಮೂಲಕ ಗಮನ ಸೆಳೆದಿದೆ.
ಭಾಲ್ಕಿ ಪಟ್ಟಣ ಹಾಗೂ ಧನ್ನೂರ (ಎಚ್) ಗ್ರಾಮದ 25 ವೃದ್ಧ ಮಹಿಳೆಯರನ್ನು ಸಂಘದಿಂದ ಈಚೆಗೆ ಕಾರು ಹಾಗೂ ಕ್ರೂಸರ್‍ನಲ್ಲಿ ಬಸವಕಲ್ಯಾಣ ಪ್ರವಾಸಕ್ಕೆ ಒಯ್ಯಲಾಯಿತು.
ಬೀದರ್ ಜಿಲ್ಲೆ ಬಸವಾದಿ ಶರಣರ ಕಾರ್ಯ ಕ್ಷೇತ್ರವಾಗಿದೆ. ಬಸವಕಲ್ಯಾಣದಲ್ಲಿ ಜಗತ್ತಿನ ಮೊಟ್ಟ ಮೊದಲ ಸಂಸತ್ತು ಎಂದೇ ಕರೆಯಲಾಗುವ ಅನುಭವ ಮಂಟಪ ಸೇರಿದಂತೆ ಅನೇಕ ಮಹತ್ವದ ಸ್ಮಾರಕಗಳು ಇವೆ. ಅವುಗಳ ಪ್ರಚಾರ ಹಾಗೂ ಮಹತ್ವದ ಮನವರಿಕೆ ಮಾಡಿಕೊಡುವ ದಿಸೆಯಲ್ಲಿ ಸಂಘದಿಂದ ಉಚಿತ ಪ್ರವಾಸ ವ್ಯವಸ್ಥೆ ಮಾಡಲಾಗಿತ್ತು ಎಂದು ವೀರಶೈವ ಲಿಂಗಾಯತ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಅಶೋಕಕುಮಾರ ನಾಗೂರೆ ತಿಳಿಸಿದರು.
ಧನ್ನೂರ(ಎಚ್) ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ದೇವಕಿ ನಾಗೂರೆ ಪ್ರವಾಸದ ನೇತೃತ್ವ ವಹಿಸಿದ್ದರು. ಮಹಿಳೆಯರು ಬಸವಕಲ್ಯಾಣದಲ್ಲಿ ಮೂಲ ಅನುಭವ ಮಂಟಪ, ನೂತನವಾಗಿ ನಿರ್ಮಿಸುತ್ತಿರುವ ಅನುಭವ ಮಂಟಪ, 108 ಅಡಿಯ ಬಸವೇಶ್ವರ ಮೂರ್ತಿ, ಬಸವೇಶ್ವರ ದೇವಸ್ಥಾನ ಹಾಗೂ ಶರಣರ ಸ್ಮಾರಕಗಳನ್ನು ವೀಕ್ಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net