

ಬಸವಕಲ್ಯಾಣ: ತಾಲೂಕಿನ ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರ ಕಾರಿಗೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದ್ದು, ಶ್ರೀಗಳು ಆಪಾಯದಿಂದ ಪಾರಾಗಿದ್ದಾರೆ.
ಮಂಗಳವಾರ ಸಂಜೆ ನಗರದ ರಾಷ್ಟ್ರೀಯ ಹೆದ್ದಾರಿ ಬದಿಯ ಹೊಳಕುಂದೆ ಪೆಟ್ರೋಲ್ ಬಂಕ್ ಬಳಿ ವಾಹನಕ್ಕೆ ಡೀಸೆಲ್ ಹಾಕಿಕೊಳ್ಳಲು ವಾಹನ ತಿರುಗಿಸುತ್ತಿದ್ದಾಗ ಹಿಂದಿನಿಂದ ಬಂದ ಲಾರಿ ಕಾರಿಗೆ ಎಡಬದಿ ಡೋರ್ಗೆ ಟಚ್ ಆಗಿದೆ. ಚಾಲಕ ಲಾರಿಯನ್ನು ನಿಯಂತ್ರಿಸಿದ್ದರಿಂದ ಕಾರಿಗೂ ಹೆಚ್ಚಿನ ಹಾನಿ ಆಗಿಲ್ಲ. ತಮ್ಮ ಕಾರನ್ನು ಬದಲಾಯಿಸಿ ಬೇರೆ ಕಾರಿನಲ್ಲಿ ಪೂಜ್ಯರು ತಮ್ಮ ನಿಗದಿತ ಕಾರ್ಯಕ್ರದಲ್ಲಿ ಭಾಗವಹಿಸಲು ತೆರಳಿದರು.
ಕಾರಿಗೆ ಹಿಂಬದಿಯಿಂದ ಬಂದ ಲಾರಿ ಸಣ್ಣದಾಗಿ ಡಿಕ್ಕಿಯಾಗಿದೆ. ಹಾರಕೂಡ ಶ್ರೀ ಸದ್ಗುರು ಚನ್ನಬಸವ ಶಿವಯೋಗಿಗಳ ಶಕ್ತಿ ಹಾಗೂ ಭಕ್ತರ ಭಕ್ತಿಯಿಂದಾಗಿ ಯಾವುದೇ ಅಪಾಯವಾಗಿಲ್ಲ. ಸಣ್ಣ-ಪುಟ್ಟ ಗಾಯಗಳು ಸಹ ಆಗಿಲ್ಲ. ಭಕ್ತರು ಗಾಬರಿ ಆಗಬಾರದು ಎಂದು ಹಾರಕೂಡ ಶ್ರೀಗಳು ವಿಜಯವಾಣಿಗೆ ತಿಳಿಸಿದ್ದಾರೆ.