ಸಂಗೀತದಿಂದ ಮನಸ್ಸಿಗೆ ನೆಮ್ಮದಿ

Gorta
Published on

ಹುಲಸೂರು: ಸಂಗೀತದಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗಲಿದೆ. ಸಂಗೀತ ರೋಗವನ್ನು ನಿವಾರಿಸುವ ಶಕ್ತಿ ಹೊಂದಿದೆ ಎಂದು ಬೇಮಳಖೇಡ, ಗೋರ್ಟಾದ ಶ್ರೀ ಡಾ.ರಾಜಶೇಖರ ಶಿವಾಚಾರ್ಯ ಹೇಳಿದರು.
ಗೋರ್ಟಾ(ಬಿ) ಗ್ರಾಮದ ಶ್ರೀ ಸಂಗೀತ ರುದ್ರೇಶ್ವರ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಶ್ರೀ ಸಂಗೀತ ರುದ್ರೇಶ್ವರ 2ನೇ ಜಾತ್ರಾ ಮಹೋತ್ಸವ, ಶ್ರೀ ಪಂ.ವಿರೂಪಾಕ್ಷಯ್ಯ ಸ್ವಾಮೀಜಿ ಸಂಸ್ಮರಣೋತ್ಸವ, ಕಲ್ಯಾಣ ಕರ್ನಾಟಕ ಸಂಗೀತ ಸಮ್ಮೇಳನ ಹಾಗೂ ಪಂ.ವಿರೂಪಾಕ್ಷ ಸಮ್ಮಾನ್ ರಾಷ್ಟ್ರೀಯ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಗೀತ ಆಲಿಸುವುದರಿಂದ ಏಕಾಗ್ರತೆ ಮೂಡಿ ಮನಸ್ಸು ಚೈತನ್ಯ ಭರಿತವಾಗುತ್ತದೆ. ಮಕ್ಕಳಿಗೂ ಸಂಗೀತದಲ್ಲಿ ಆಸಕ್ತಿ ಬರುವಂತೆ ಮಾಡಬೇಕಾಗಿದೆ ಎಂದರು.
ಸಂಗೀತ ಕ್ಷೇತ್ರದಲ್ಲಿ ಗೋರ್ಟಾ ಗ್ರಾಮ ತನ್ನದೇ ಆದ ಸಾಧನೆ ಮಾಡಿದೆ. ಚಾಲುಕ್ಯರ ಆಳ್ವಿಕೆಯಲ್ಲಿ ಇಲ್ಲಿ ಸಂಗೀತ ವಿಶ್ವವಿದ್ಯಾಲಯ ಇತ್ತು. ಸಂಗೀತಕ್ಕೆ ಯಾವುದೇ ಜಾತಿ, ಧರ್ಮ ಇಲ್ಲ ಎಂದ ಅವರು, ಸಂಗೀತ ಕ್ಷೇತ್ರದ ಸಾಧಕರು ಜಾತಿ ವಿಷಯದಲ್ಲಿ ತಾರತಮ್ಯ ಮಾಡದೆ ತಮ್ಮ ಸೇವೆ ಮುಂದುವರಿಸಿಕೊಂಡು ಹೋಗುತ್ತಾರೆ. ಪ್ರಶಸ್ತಿ ಪುರಸ್ಕೃತ ಉಸ್ತಾದ್ ಶೇಖ ಹನ್ನುಮಿಯಾ ಮುಸ್ಲಿಂ ಧರ್ಮದವರಿದ್ದರೂ ಸರಸ್ವತಿ ಸಂಗೀತ ಶಾಲೆ ಪ್ರಾರಂಭಿಸಿ ಬಹಳಷ್ಟು ಮಕ್ಕಳಿಗೆ ಸಂಗೀತ ಜ್ಞಾನ ನೀಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗೋರ್ಟಾ(ಬಿ) ಐತಿಹಾಸಿಕ ಗ್ರಾಮ. ಚಾಲುಕ್ಯರ ಕಾಲ (ಕ್ರಿ.ಶ.10-11ನೇ ಶತಮಾನ)ದಲ್ಲಿ ಸಂಗೀತ ವಿಶ್ವವಿದ್ಯಾಲಯದ ತಾಣವಾಗಿತ್ತು. ಈ ಗ್ರಾಮ ಕಲೆ, ಸಾಹಿತ್ಯ, ಸಂಗೀತದ ತವರೂರಾಗಿತ್ತು ಎಂಬುದನ್ನು ಅನೇಕ ದಾಖಲೆಗಳು ಹೇಳುತ್ತವೆ. ಈ ಭಾಗದಲ್ಲಿ ಸಂಗೀತ ದೇವಾಲಯ ಇರುವ ಏಕೈಕ ಗ್ರಾಮ ಇದಾಗಿದೆ ಎಂದರು.
ವಿರೂಪಾಕ್ಷ ಸಮ್ಮಾನ್ ಪ್ರಶಸ್ತಿ ಸ್ವೀಕರಿಸಿದ ತಬಲಾ ವಾದಕ ಡಾ.ಕೇಶವರಾವ ಸೂರ್ಯವಂಶಿ ಮಾತನಾಡಿ, 1950ರಲ್ಲಿ ಗೋರ್ಟಾದಲ್ಲಿ ರಾಜ್ಯ ಮಟ್ಟದ ಮೂರು ದಿನದ ಸಂಗೀತ ಸಮ್ಮೇಳನ ಅರ್ಥಪೂರ್ಣವಾಗಿ ಮಾಡಲಾಗಿತ್ತು. ಸಂಗೀತ ಕ್ಷೇತ್ರಕ್ಕೆ ಗ್ರಾಮದ ಕೊಡುಗೆ ಸಾಕಷ್ಟಿದೆ. ದಿ.ವಿರೂಪಾಕ್ಷ ಸ್ವಾಮಿ ಖ್ಯಾತ ಸಂಗೀತ ಶಿಕ್ಷಕರಾಗಿದ್ದರು. ಅವರ ಸೇವೆ ಇಂದಿಗೂ ಅಮರವಾಗಿದೆ ಎಂದರು.
ಗುರುನಾಥ ಅಕ್ಕಣ್ಣ, ಗಂಗಾಧರ ಸ್ವಾಮಿ ಮಾತನಾಡಿದರು. ಶ್ರೀಶೈಲ ಅಕ್ಕಮಹಾದೇವಿ ಚೈತನ್ಯ ಪೀಠದ ಪೂಜ್ಯ ಕರುಣಾದೇವಿ ಮಾತೆ ಸಾನ್ನಿಧ್ಯ ವಹಿಸಿದ್ದರು, ಡಿವೈಎಸ್ಪಿ ಗಂಗಾಧರ ಸ್ವಾಮಿ, ಪ್ರಮುಖರಾದ ಮಹಾದೇವ ಪಟ್ನೆ, ಕಂಬಳಬಾಯಿ ಅಕ್ಕಣ್ಣ, ಪರಮೇಶ್ವರ ಪಾಟೀಲ್, ಸೋಮೇಶ್ವರ ಬಿರಾದಾರ್, ಶರಣಮ್ಮ ಮುದ್ದಾ, ಶಿವಯ್ಯ ಸ್ವಾಮಿ, ಮಲ್ಲಪ್ಪ ಧಬಾಲೆ, ಚನ್ನಬಸಪ್ಪ ಪತಂಗೆ, ಡಾ.ಸಿದ್ದರಾಮಯ್ಯ ಸ್ವಾಮಿ ಇತರರಿದ್ದರು. ರುದ್ರೇಶ್ವರ ಸ್ವಾಮಿ ಸ್ವಾಗತಿಸಿದರು. ಬಸವರಾಜ ಹಾಲಹಳ್ಳಿ ನಿರೂಪಣೆ ಮಾಡಿದರು.

ಸೂರ್ಯವಂಶಿ, ಹನ್ನುಮಿಯಾಗೆ ಪ್ರಶಸ್ತಿ
ಪೂಜ್ಯ ಪಂ.ವಿರೂಪಾಕ್ಷಯ್ಯ ಸ್ವಾಮಿ ಗೋರ್ಟಾ ಸ್ಮರಣಾರ್ಥ ಕೊಡಮಾಡುವ ಪಂ.ವಿರೂಪಾಕ್ಷ ಸಮ್ಮಾನ್ ರಾಷ್ಟ್ರೀಯ ಪುರಸ್ಕಾರವನ್ನು ಭಾಲ್ಕಿಯ ತಬಲಾ ವಾದಕ ಕೇಶವರಾವ ಸೂರ್ಯವಂಶಿ (2022) ಮತ್ತು ಸಿತಾರ ವಾದಕ ಭಾಲ್ಕಿಯ ಶೇಖ್ ಹನ್ನುಮಿಯಾ (2023) ಅವರಿಗೆ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದರಾದ ಹಣಮಂತ ಚಿದ್ರಿ, ಜನಾರ್ಧನ ವಾಗಮಾರೆ, ಅರ್ಜುನ ವಠಾರ, ರಾಜಕುಮಾರ ಹೂಗಾರ, ಗಣೇಶ ಪರೀಟ್, ಅಶ್ವಿನಿ ರಾಜಕುಮಾರ, ಸಂಗಶೆಟ್ಟಿ, ರೇವಪ್ಪ ಪಾಂಚಾಳ, ಮಕ್ಕಳ ತಜ್ಞ ಡಾ.ಸುಭಾಷ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net