

ಬೀದರ್: ಕಲ್ಯಾಣ ಕರ್ನಾಟಕದ ಪದವೀಧರರು ಮತ್ತು ಶಿಕ್ಷಕರ ಸಮಸ್ಯೆ ಕುರಿತು ಸದನದಲ್ಲಿ ಧ್ವನಿ ಎತ್ತಿ ಸ್ಪಂದಿಸಲು ನನಗೂ ಒಂದು ಅವಕಾಶ ನೀಡಿದರೆ ಒಬ್ಬ ವಿಧಾನ ಪರಿಷತ್ ಸದಸ್ಯ ಏನೆಲ್ಲ ಮಾಡಬಹುದು ಎಂಬುದನ್ನು ತೋರಿಸುವೆ ಎಂದು ಮೇಲ್ಮನೆ ಈಶಾನ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಾರಾ ಪ್ರತಾಪರಡ್ಡಿ ಹೇಳಿದರು.
ಹಿಂದಿನ ಎಂಎಲ್ಸಿಗಳು ಏನೇನು ಕೆಲಸ ಮಾಡಿದ್ದಾರೆ ಎಂಬುದನ್ನು ತೋರಿಸಬೇಕು. ಈವರೆಗೆ ಸದನದಲ್ಲಿ ಎಷ್ಟು ಪ್ರಶ್ನೆ ಕೇಳಿದ್ದಾರೆ? ಯಾವ ಜಿಲ್ಲೆಗಳಿಗೆ ಎಷ್ಟು ಬಾರಿ ಪ್ರವಾಸ ಕೈಗೊಂಡಿದ್ದಾರೆ ಎಂಬ ಬಗ್ಗೆ ಬಹಿರಂಗವಾಗಿ ಹೇಳಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಸವಾಲೆಸೆದರು.
ಕೇವಲ ಶಾಲೆಗಳಿಗೆ ನಾಲ್ಕಾರು ಬೆಂಚ್ ನೀಡಿ ಶೌಚಗೃಹ ಕಟ್ಟಿಸಿಕೊಟ್ಟರೆ ಸಾಲದು. ಪದವೀಧರರು, ಅತಿಥಿ ಉಪನ್ಯಾಸಕರ ಸಮಸ್ಯೆ, 371(ಜೆ) ಅಡಿ ನೇಮಕವಾದ ಶಿಕ್ಷಕರ ಬಡ್ತಿ ಸಮಸ್ಯೆಗೆ ಪರಿಹಾರ, ಖಾಸಗಿ ಶಾಲಾ ಕಾಲೇಜು ಶಿಕ್ಷಕರಿಗೆ ಆರೋಗ್ಯ ವಿಮೆ ಸೇರಿ 42 ವಿಧಾನಸಭೆ, ಐದು ಲೋಕಸಭಾ ಕ್ಷೇತ್ರಗಳ ಪದವೀಧರರು ಮತ್ತು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವೆ. ಯಾರ ಗುಲಾಮಗಿರಿಯೂ ಮಾಡದೆ ಧೈರ್ಯದಿಂದ ಸದನದಲ್ಲಿ ಧ್ವನಿ ಎತ್ತುವೆ ಎಂದರು.
ಕಲ್ಯಾಣ ಕರ್ನಾಟಕದ ಖಾಸಗಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿನ ಶಿಕ್ಷಕ, ಉಪನ್ಯಾಸಕರಿಗೆ ಕಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅನುದಾನ ಜತೆಗೆ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಏಳು ಜಿಲ್ಲೆಗಳಲ್ಲಿ ಉದ್ಯೋಗ ಮೇಳ ಆಯೋಜನೆಗೆ ಪ್ರಯತ್ನಿಸುವುದಾಗಿ ಹೇಳಿದರು.
ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ, ನಟ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಕಣದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಇಲ್ಲ. ಹೀಗಾಗಿ ಪಕ್ಷೇತರ ಅಭ್ಯರ್ಥಿ ಪ್ರತಾಪರಡ್ಡಿ ಅವರಿಗೆ ಬೆಂಬಲ ನೀಡಲಾಗಿದೆ ಎಂದರು.
ಮುಖಂಡ ನಸಿಮೊದ್ದೀನ್ ಪಟೇಲ್ ಇದ್ದರು.