

ಬೀದರ್: ಗುರು ಮತ್ತು ಶಿಷ್ಯರ ಸಂಬಂಧ ಹೂ-ಬಳ್ಳಿಯಂತೆ ಇರುತ್ತದೆ. ವಿದ್ಯಾರ್ಥಿಯೆಂಬ ಹೂವು ಎಲ್ಲೆಡೆ ಸಂಚರಿಸಿ ಸಾಧನೆ ಉನ್ನತ ಸ್ಥಾನಕ್ಕೆ ಹೋಗುತ್ತದೆ. ಆದರೆ ಬಳ್ಳಿಯೆಂಬ ಶಿಕ್ಷಕ ಅದೇ ಶಾಲೆಯಲ್ಲಿ ಜೀವನಪೂರ್ತಿ ಶಿಕ್ಷಣ ನೀಡುತ್ತ ಜೀವನ ಸಾಗಿಸುತ್ತಾನೆ. ವಿದ್ಯಾರ್ಥಿಗಳ ಸಾಧನೆಯಲ್ಲೇ ಶಿಕ್ಷಕರು ಸಂತಸಪಡುತ್ತಾರೆ ಎಂದು ವಿದ್ಯಾರಣ್ಯ ಪ್ರೌಢಶಾಲೆ ಮುಖ್ಯಗುರು ಪ್ರತಿಭಾ ಚಾಮಾ ಹೇಳಿದರು.
ಸಾಯಿ ಆದರ್ಶ ಪ್ರಾಥಮಿಕ ಮತ್ತು ಪ್ರೌಢಶಾಲೆ 1994-95ನೇ ಸಾಲಿನ ವಿದ್ಯಾರ್ಥಿ ಬಳಗ ನಗರದ ಪಟ್ನೆ ಸಭಾಂಗಣದಲ್ಲಿ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಳೆಯ ವಿದ್ಯಾರ್ಥಿಗಳ ಸಂಘ ಇರುವ ಶಾಲೆಗಳು ಶ್ರೇಷ್ಠ. ಕಲಿತ ಶಾಲೆಗೆ ಹಳೆಯ ವಿದ್ಯಾರ್ಥಿಗಳು ಸಹಕಾರ ನೀಡಬೇಕು ಎಂದರು.
ಆರಂಭದಲ್ಲಿ ಶಿಕ್ಷಕರಾಗಿ ಸೇವೆಗೆ ಸೇರುವ ನಾವು ಬರುಬರುತ್ತ ಮಕ್ಕಳ ಅಂತಾರಾಳಕ್ಕೆ ಇಳಿದು ಪಾಠ ಮಾಡುತ್ತಲೇ ಆಸಕ್ತಿಗನುಗುಣ ಬೋಧನೆ ಮಾಡಿ ಅವರ ಹೃದಯ ಗೆದ್ದು ಗುರುವಾಗಿ ಪರಿವರ್ತನೆ ಆಗುತ್ತೇವೆ. ದಾರಿಯಲ್ಲಿ ವಿದ್ಯಾರ್ಥಿಗಳು ನಮ್ಮನ್ನು ಗುರುತಿಸಿ ವಂದಿಸಿದರೆ ಗುರುವಿನ ಜೀವನ ಸಾರ್ಥಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀ ಸತ್ಯಸಾಯಿ ಸೇವಾ ಸಮಿತಿ ಅಧ್ಯಕ್ಷೆ ವಿಮಲಾಬಾಯಿ ವಿ.ಫುಲೇಕರ್ ಉದ್ಘಾಟಿಸಿ ಮಾತನಾಡಿ, ಕಲಿತ ಶಾಲೆ ಹಾಗೂ ಗುರುವಿಗೆ ಶಿರಬಾಗಿ ನಡೆದರೆ ಬದುಕು ಹಸನಾಗುತ್ತದೆ. ಹಳೆಯ ವಿದ್ಯಾರ್ಥಿಗಳು ಕಲಿತ ಶಾಲೆಗೆ ತಮ್ಮ ಕೈಲಾದಷ್ಟು ಮುಂದಿನ ಪೀಳಿಗೆಗೆ ಸಹಕಾರವಾಗುವ ನಿಟ್ಟಿನಲ್ಲಿ ಸಹಾಯಹಸ್ತ ಚಾಚಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಹಳೆಯ ವಿದ್ಯಾರ್ಥಿ ಬಳಗದ ಅಧ್ಯಕ್ಷ ವೀರಶೆಟ್ಟಿ ಪಟ್ನೆ ಮಾತನಾಡಿ, ಪ್ರತಿವರ್ಷ ಹಳೆಯ ವಿದ್ಯಾರ್ಥಿ ಬಳಗದಿಂದ ಕಲಿತ ಶಾಲೆಯಲ್ಲಿ ಒಂದು ಕಾರ್ಯಕ್ರಮ ಹಮ್ಮಿಕೊಂಡು ಒಂದೆಡೆ ಸೇರಿಸುವ ಪ್ರಯತ್ನ ಮಾಡಲಾಗುವುದು. ಕೈಲಾದಷ್ಟು ನಿ ಸಂಗ್ರಹಿಸಿ ತೊಂದರೆಯಲ್ಲಿರುವ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಸಹಾಯ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.
ಶ್ರೀ ಡಾ.ರಾಜಶೇಖರ ಶಿವಾಚಾರ್ಯ, ಶ್ರೀ ಪ್ರಭುದೇವ ಸ್ವಾಮೀಜಿ, ಶಿಕ್ಷಣ ಚಿಂತಕ ಮಾರುತಿ ಪಂಚಭಾಯಿ, ಎಸ್.ಬಿ. ಕುಚಬಾಳ, ಶಿವಕುಮಾರ ಕಟ್ಟೆ, ತುಕಾರಾಮರಡ್ಡಿ, ಗುರುರಾಜ ಪಾಟೀಲ್, ಸಾವಿತ್ರಿ ಹೆಗ್ಗೆ, ಅರ್ಚನಾ ಕುಲಕರ್ಣಿ, ಜಗದೇವಿ ಉದಗೀರೆ, ಜ್ಯೋತಿ ಕುಲಕರ್ಣಿ, ಈಶ್ವರ ಮಲ್ಕಾಪುರ, ಕಲ್ಯಾಣರಾವ ಚಳಕಾಪುರೆ ಇತರರಿದ್ದರು.
ಹಳೆಯ ವಿದ್ಯಾರ್ಥಿ ಬಳಗದ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ನಂದಿನಿ ಗಾಯಕವಾಡ ನಿರೂಪಣೆ ಮಾಡಿದರು. ಮೀನಾಕುಮಾರಿ ಚಂಡಕರ್ಕಿ ವಂದಿಸಿದರು. ಮಹೇಶಕುಮಾರ ಕುಂಬಾರ ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತು. ಪ್ರಸ್ತುತ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಸನ್ಮಾನಿಸಲಾಯಿತು.