

ಬೀದರ್: ಇಲ್ಲಿನ ಜೆಸ್ಕಾಂ ಕಚೇರಿಯ ಹನುಮಾನ ಮಂದಿರ ಹತ್ತಿರದ ಭಾರತ ಪತ್ತಿನ ಸೌಹಾರ್ದ ಸಹಕಾರಿ (ಬ್ಯಾಂಕ್)ಯ ನೂತನ ಅಧ್ಯಕ್ಷರಾಗಿ ವೀರಶೆಟ್ಟಿ ಖ್ಯಾಮಾ ನೇಮಕಗೊಂಡಿದ್ದಾರೆ.
ಬಸವ ಜಯಂತಿ ದಿನದಂದು ಶುಕ್ರವಾರ ಬ್ಯಾಂಕ್ ಅಧ್ಯಕ್ಷರಾಗಿ ಅಕಾರ ಸ್ವೀಕರಿಸಿ ಮಾತನಾಡಿದ ಖ್ಯಾಮಾ, ಬಡವರಿಗೆ, ವ್ಯಾಪಾರಸ್ಥರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಸಮಾನ ಮನಸ್ಕರು ಸೇರಿ ಈ ಬ್ಯಾಂಕ್ ಸ್ಥಾಪಿಸಲಾಗಿದೆ. ಇದೀಗ ನನಗೆ ಜವಾಬ್ದಾರಿ ವಹಿಸಿದ್ದು ಖುಷಿ ತಂದಿದ್ದು, ಎಲ್ಲ ನಿರ್ದೇಶಕರ, ಸದಸ್ಯರ ಸಹಕಾರ, ಸಲಹೆ ಮೇರೆಗೆ ಉತ್ತಮವಾಗಿ ಕಾರ್ಯನಿರ್ವಹಿಸುವೆ ಎಂದು ಹೇಳಿದರು.
ಠೇವಣಿದಾರರ ಹಿತ ಕಾಪಾಡುವ ನಿಟ್ಟಿನಲ್ಲಿ ನಾನಾ ಕ್ರಮಕೈಗೊಳ್ಳಲಾಗುವುದು. ಸಾಲ ಪಡೆದವರು ಸಕಾಲಕ್ಕೆ ಹಿಂದುರುಗಿಸಿ ಸಹಕರಿಸಬೇಕು. ಮುಂದಿನ ಒಂದು ವರ್ಷದಲ್ಲಿ ಬ್ಯಾಂಕ್ ಸದೃಢವಾಗಿ ಮಾಡಲಾಗುವುದು ಎಂದು ಹೇಳಿದರು.
ನಿಕಟಪೂರ್ವ ಅಧ್ಯಕ್ಷ ನಂದಾ ವಿವೇಕಾನಂದಾ, ಉಪಾಧ್ಯಕ್ಷ ತಿಪ್ಪಣ್ಣ, ನಿರ್ದೇಶಕರಾದ ಮಡಿವಾಳಪ್ಪ ಖೇಣಿ, ಆದೀಲ್, ಪ್ರಮುಖರಾದ ರಾಜೇಶ್ವರಿ ಖ್ಯಾಮಾ, ಸದಾನಂದ ಜೋಶಿ, ಮಲ್ಲಿಕಾರ್ಜುನ ಮರಖಲೆ, ಸಿಇಒ ರತನ್ ಸಾಗರ್, ಸಹಾಯಕ ವ್ಯವಸ್ಥಾಪಕ ಸಾಲೋಮನ್, ಸಿಬ್ಬಂದಿ ಸುಧಾಕಾರ, ಜೈಶಾಂತ ಇತರರಿದ್ದರು.