

ಬೀದರ್: ನಗರದಲ್ಲಿ ಶುಕ್ರವಾರ ನಡೆದ ವೈಭವದ ಮೆರವಣಿಗೆ ಮಹಾ ಮಾನವತಾವಾದಿ, ಸಾಮಾಜಿಕ ಚಳವಳಿಯ ಹರಿಕಾರ, ಕನರ್ಾಟಕ ಸಾಂಸ್ಕೃತಿಕ ನಾಯಕ ಮಹಾತ್ಮ ಬಸವಣ್ಣನವರ ಜಯಂತಿ ಸಂಭ್ರಮ ಹೆಚ್ಚಿಸಿತು. ಬಸವ ಜಯಂತಿ ಉತ್ಸವ ಸಮಿತಿ ಆಯೋಜಿಸಿದ್ದ ಮೆರವಣಿಗೆಯಲ್ಲಿ ಅಪಾರ ಬಸವಭಕ್ತರು ಪಾಲ್ಗೊಂಡರು. ನಾಲ್ಕೈದು ಗಂಟೆ ನಡೆದ ಅದ್ದೂರಿ ಮೆರವಣಿಗೆ ನಗರ ಬಸವಮಯಗೊಳಿಸಿತು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಜಿಲ್ಲಾಡಳಿತದಿಂದ ಬಸವಣ್ಣ ಹಾಗೂ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಬೆಳಗ್ಗೆ ಡಿಸಿ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು. ಡಿಸಿ ಗೋವಿಂದರಡ್ಡಿ ಅವರು ಬಸವೇಶ್ವರ, ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ನಂತರ ಜಿಲ್ಲಾಡಳಿತದಿಂದ ಇಲ್ಲಿನ ಬಸವೇಶ್ವರ ವೃತ್ತದ ಅಶ್ವಾರೂಢ ಬಸವಣ್ಣನವರ ಪುತ್ಥಳಿಗೆ ಹೂಮಾಲೆ ಹಾಕಿ ಗೌರವ ಸಲ್ಲಿಸಲಾಯಿತು. ಸಂಜೆ ಉತ್ಸವ ಸಮಿತಿಯಿಂದ ಮೆರವಣಿಗೆ ಆಯೋಜಿಸಲಾಗಿತ್ತು.
ಪೌರಾಡಳಿತ ಸಚಿವ ರಹೀಮ್ಖಾನ್, ನಗರಸಭೆ ಅಧ್ಯಕ್ಷ ಮಹ್ಮದ್ ಗೌಸೊದ್ದೀನ್, ಎಸ್ಪಿ ಚನ್ನಬಸವಣ್ಣ ಲಂಗೋಟಿ, ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ರಾಜೇಂದ್ರಕುಮಾರ ಗಂದಗೆ, ಸೋಮಶೇಖರ ಪಾಟೀಲ್ ಗಾದಗಿ, ಶರಣಪ್ಪ ಮಿಠಾರೆ, ಶಿವಶರಣಪ್ಪ ವಾಲಿ, ಬಸವರಾಜ ಧನ್ನೂರ, ಡಾ.ರಜನೀಶ್ ವಾಲಿ, ವಿರೂಪಾಕ್ಷ ಗಾದಗಿ, ದೀಪಕ್ ವಾಲಿ, ವಿವೇಕ್ ವಾಲಿ, ಆದೀಶ್ ವಾಲಿ, ಅಶೋಕ ಕರಂಜಿ, ಮಾರುತಿ ಬೌದ್ಧೆ, ಪಂಡಿತ ಚಿದ್ರಿ, ಅಮೃತರಾವ ಚಿಮಕೋಡೆ, ವಿಜಯಕುಮಾರ ಸೋನಾರೆ, ಶಕುಂತಲಾ ಬೆಲ್ದಾಳೆ, ಗೀತಾ ಚಿದ್ರಿ, ಇತರರಿದ್ದರು.
ಈ ವೇಳೆ ಮಾತನಾಡಿದ ಪ್ರಮುಖರು, ಬಸವಣ್ಣನವರು ಮನುಕುಲದ ಆಸ್ತಿ. ಉತ್ತಮ ಸಮಾಜ ನಿರ್ಮಾಣವೇ ಅವರ ಚಿಂತನೆಗಳ ಸಾರವಾಗಿದೆ. ಜಾತಿ, ಧರ್ಮ ಮೀರಿದ ತತ್ವಗಳು ಬಸವ ವಿಚಾರಧಾರೆ ಒಳಗೊಂಡಿವೆ. ಬಸವ ತತ್ವವು ಜಾಗತಿಕ ಮೌಲ್ಯ ಹೊಂದಿವೆ. ಮಹಾಪುರುಷರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ. ಅವರ ತತ್ವಾದರ್ಶ ಎಲ್ಲರಿಗೂ ಅನುಕರಣೀಯ ಎಂದರು.