ಮೂರು ದಿನ ಬಸವ ಜಯಂತಿ ಆಚರಣೆ

basavannaa
Published on

ಬೀದರ್: ಬಸವಣ್ಣನವರ ಜಯಂತಿಯನ್ನು ನಗರದಲ್ಲಿ ಮೇ 8 ರಿಂದ 10 ರ ವರೆಗೆ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಸುರೇಶ ಚನಶೆಟ್ಟಿ ತಿಳಿಸಿದ್ದಾರೆ.
ಮೇ 4 ರಿಂದ 6 ರ ವರೆಗೆ ಜಯಂತಿ ಪ್ರಚಾರಾರ್ಥ ಕಾರ್ಯಕ್ರಮ ಹಾಗೂ ಮೇ 8 ರಿಂದ 10 ರ ವರೆಗೆ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಜಯಂತಿ ಕಾರ್ಯಕ್ರಮ ನಡೆಯಲಿವೆ ಎಂದು ಹೇಳಿದ್ದಾರೆ.
ಮೇ 4 ರಂದು ಸಂಜೆ 5.30ಕ್ಕೆ ನಗರದ 25 ಬಡಾವಣೆಗಳಲ್ಲಿ ವಚನ ಭಜನೆಯೊಂದಿಗೆ ಬಸವ ಪಥ ಸಂಚಲನ, ಮೇ 5 ರಂದು ಸಂಜೆ 5ಕ್ಕೆ ಬಸವ ಮುಕ್ತಿ ಮಂದಿರದಿಂದ ಬಸವೇಶ್ವರ ವೃತ್ತದ ವರೆಗೆ ಬಸವ ಸೌಹಾರ್ದ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಮೇ 6 ರಂದು ಬೆಳಿಗ್ಗೆ 9ಕ್ಕೆ ಸಿದ್ಧಾರೂಢ ಮಠದಿಂದ ಪಾಪನಾಶ ಮಂದಿರದ ವರೆಗೆ 2024 ಬೈಕ್‍ಗಳ ಮಹಾ ರ್ಯಾಲಿ, 8 ರಂದು ಬೆಳಿಗ್ಗೆ 9.30ಕ್ಕೆ  ನೆಹರೂ ಕ್ರೀಡಾಂಗಣ ಸಮೀಪದ ಸಾಯಿ ಸ್ಕೂಲ್ ಆವರಣದಿಂದ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಕಾರು ರ್ಯಾಲಿ ನಡೆಯಲಿದೆ ಎಂದು ಹೇಳಿದ್ದಾರೆ.
8 ರಂದು ಬೆಳಿಗ್ಗೆ 6ಕ್ಕೆ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ವಚನ ಪಾರಾಯಣ, ಬೆಳಿಗ್ಗೆ 11 ರಿಂದ ಸಂಜೆ 5 ರ ವರೆಗೆ ಲಿಂ. ಶಕುಂತಲಾ ವಾಲಿ ಅವರ ಸ್ಮರಣಾರ್ಥ ವಾಲಿಶ್ರೀ ಸೂಪರ್ ಸ್ಪೆಷಾಲಿಟಿ ಆಸ್ಪತೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಜರುಗಲಿದೆ. ಲೋಕಸಭೆ ಚುನಾವಣೆಯಲ್ಲಿ ಮತ ಹಕ್ಕು ಚಲಾಯಿಸಿದವರು ತೋರು ಬೆರಳಿಗೆ ಹಚ್ಚಿದ ಶಾಯಿ ತೋರಿಸಿ ಶಿಬಿರದಲ್ಲಿ ತಪಾಸಣೆ, ಪರೀಕ್ಷೆ, ಔಷಧಿ ಹಾಗೂ ಪ್ರಸಾದ ಉಚಿತವಾಗಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ಸಂಜೆ 5.30ಕ್ಕೆ ರಂಗ ಮಂದಿರದಲ್ಲಿ ಮಕ್ಕಳಿಂದ ವೇಷ ಭೂಷಣ ಪ್ರದರ್ಶನ, ಸಂಜೆ 6ಕ್ಕೆ ಬೆಂಗಳೂರಿನ ಖ್ಯಾತ ಚಿಂತಕ ಡಾ. ವಾಸು ಎಚ್.ವಿ. ಅವರಿಂದ ಉಪನ್ಯಾಸ, ರಾಜ್ಯಮಟ್ಟದ ಸಂಗೀತ ಕಲಾವಿದರಾದ ಕಲಬುರಗಿಯ ಡಾ. ಜಯದೇವಿ ಜಂಗಮಶೆಟ್ಟಿ, ಬಸವರಾಜ ಹೂಗಾರ, ಸಿದ್ರಾಮಯ್ಯ ಸ್ವಾಮಿ, ಗೋರಟಾ ಜನಾರ್ಧನ್ ವಾಘಮಾರೆ ಹಾಗೂ ರಾಜಕುಮಾರ ಹೂಗಾರ ಮದಕಟ್ಟಿ ಅವರಿಂದ ಸಂಗೀತ, ಭಾಲ್ಕಿಯ ಹಿರೇಮಠ ಸಂಸ್ಥಾನದ ಗುರು ಚನ್ನಬಸವ ಸಾಂಸ್ಕøತಿಕ, ಕಲಾ, ಕ್ರೀಡಾ ವೇದಿಕೆಯಿಂದ ಮಹಾ ಕ್ರಾಂತಿ ನಾಟಕ ಪ್ರದರ್ಶನ, ನೂಪುರ ನೃತ್ಯ ಅಕಾಡೆಮಿ, ನಾಟ್ಯಶ್ರೀ ಹಾಗೂ ನೃತ್ಯಾಂಗನ ನೃತ್ಯಾಲಯ ವತಿಯಿಂದ ವಚನ ನೃತ್ಯ ಜರುಗಲಿದೆ ಎಂದು ಹೇಳಿದ್ದಾರೆ.
9 ರಂದು ಬೆಳಿಗ್ಗೆ 6ಕ್ಕೆ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ವಚನ ಪಾರಾಯಣ, ಸಂಜೆ 6ಕ್ಕೆ ರಾಜ್ಯಮಟ್ಟದ ಸಂಗೀತ ಕಲಾವಿದರಿಂದ ವಚನ ಸಂಗೀತೋತ್ಸವ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
10 ರಂದು ಸಂಜೆ 5ಕ್ಕೆ ಬಸವೇಶ್ವರ ವೃತ್ತದಿಂದ ನಗರದ ಪ್ರಮುಖ ಬೀದಿಗಳಲ್ಲಿ ಬಸವಣ್ಣನವರ ಭಾವಚಿತ್ರ ಹಾಗೂ ವಚನ ಸಾಹಿತ್ಯದ ಭವ್ಯ ಮೆರವಣಿಗೆ ನಡೆಯಲಿದೆ. ಬಸವ ಭಕ್ತರು, ಬಸವಾನುಯಾಯಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net