

ಬೀದರ್: ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಹಲವು ಯೋಜನೆಗಳ ಸದುಪಯೋಗ ಮಾಡಿಕೊಳ್ಳುವಂತೆ ಕಾರ್ಮಿಕ ಇಲಾಖೆ ಹಾಗೂ ಸಂಘ-ಸಂಸ್ಥೆಗಳು ಜಾಗೃತಿ ಮೂಡಿಸಬೇಕು ಎಂದು ನಿವೃತ್ತ ಕಾರ್ಮಿಕ ಅಧಿಕಾರಿ ದಯಾನಂದ ಪಾಂಚಾಳ ಸಲಹೆ ನೀಡಿದರು.
ಕರುನಾಡು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಹಾಗೂ ಗಿಲಾವ್ ಕಾರ್ಮಿಕರ ಸಂಘದಿಂದ ನಗರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕರ ದಿನ ಮತ್ತು ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಕಾರ್ಮಿಕರ ವಿಮೆ ಮತ್ತವರ ಮಕ್ಕಳ ಶಿಕ್ಷಣಕ್ಕೆ ನೆರವು ಕಲ್ಪಿಸುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಇವುಗಳ ಬಗ್ಗೆ ಕಾರ್ಮಿಕರು ಅರಿತುಕೊಳ್ಳಬೇಕು. ಜಾಗೃತಿಯೇ ಕಾರ್ಮಿಕರ ಪ್ರಗತಿ ಮೂಲಮಂತ್ರ ಎಂದರು.
ಹಿರಿಯ ಇಂಜಿನಿಯರ್ ಹಾವಶೆಟ್ಟಿ ಪಾಟೀಲ್ ಉದ್ಘಾಟಿಸಿ ಮಾತನಾಡಿ, ದೇಶ ಕಟ್ಟುವ ಕಾರ್ಮಿಕರ ದಿನಾಚರಣೆ ಜತೆಗೆ ಕಾರ್ಮಿಕ ಕುಟುಂಬಗಳ ಜೀವನಮಟ್ಟ ಸುಧಾರಿಸುವ ಕೆಲಸ ಸರ್ಕಾರ ಮಾಡಬೇಕು. ನಿಜವಾದ ಕಾರ್ಮಿಕ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ಮಂಜೂರು ಮಾಡಬೇಕು. ನಕಲಿ ಕಾರ್ಮಿಕರ ಹಾವಳಿ ತಡೆಗಟ್ಟಬೇಕು ಎಂದು ಕೋರಿದರು.
ಕಾರ್ಮಿಕರೆಂದರೆ ಕೇವಲ ದುಡಿಯುವ ವರ್ಗವಲ್ಲ. ಅವರು ಸಮಾಜದ ಅಭಿವೃದ್ಧಿಯ ಅಡಿಪಾಯ. ಕಾರ್ಮಿಕರು ಇದ್ದ ಕಾರಣವೇ ಇಂದು ವಿಶ್ವದಲ್ಲಿ ಭೌತಿಕ ಪ್ರಗತಿ ಕಾಣುತ್ತಿದ್ದೇವೆ. ಯಾವುದೇ ಉದ್ಯಮ ಮತ್ತು ವ್ಯವಹಾರ ಸುಸೂತ್ರ ಮತ್ತು ವ್ಯವಸ್ಥಿತವಾಗಿ ನಡೆಯಬೇಕಾದರೆ ಕಾರ್ಮಿಕರೇ ಮುಖ್ಯ ಆಧಾರ. ಕಾರ್ಮಿಕರ ಬಗ್ಗೆ ಯಾರಿಗೂ ಕೀಳರಿಮೆ ಬೇಡ. ಗೌರವಾದರ ಇರಲಿ ಎಂದು ಹೇಳಿದರು.
ಇಂಜಿನಿಯರ್ ರವೀಂದ್ರನಾಥ ಮೂಲಗೆ ಮಾತನಾಡಿದರು. ಸಂಘದ ಸಂಸ್ಥಾಪಕ ಅಧ್ಯಕ್ಷ ಸಂಜುಕುಮಾರ ಸಿಂಧೆ ಅಧ್ಯಕ್ಷತೆ ವಹಿಸಿದ್ದರು. ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಶಿವಕುಮಾರ ನೀಲಿಕಟ್ಟಿ, ಸಂತೋಷ ಸುಂಕದ್, ರವಿ ಅಮಲಾಪುರ, ಶರಣಗೌಡ, ಕಾರ್ಮಿಕ ಸಂಘದ ಲಕ್ಷ್ಮಣ, ನಾಗನಾಥ, ಅನೀಲ, ತುಕಾರಾಮ, ತುಳಸಿರಾಮ, ಅನೀಲಕುಮಾರ, ಗೌತಮ ಹಾರೂರಗೇರಿ, ಶಿವಕುಮಾರ, ನರಸಿಂಗ ಅಮಲಾಪುರ, ಸಿದ್ಧಾರ್ಥ ಚಿದ್ರಿ, ಜೀತು ಬಸಂತಪುರ, ಪಾಂಡುರಂಗ ಮೈಲೂರು, ಯೇಷಪ್ಪ ಅಷ್ಟೂರ, ಪ್ರವೀಣ ಇತರರಿದ್ದರು.
ಹಿರಿಯ ಕಾರ್ಮಿಕರಾದ ಝರೆಮ್ಮ ಮೈಲೂರು, ಗಣಪತಿ ಶರಣಪ್ಪ, ಪೀಟರ್ ಶಂಕ್ರೆಪ್ಪ, ಅರ್ಜುನ, ಖಾರೀಫ್, ಕಮಳಮ್ಮ ಗಾದಗಿ, ಕಾಶೀನಾಥ ನಾಗಪ್ಪ, ಕಿರಣಕುಮಾರ ಕಾಂಬ್ಳೆ, ಸಾಬೀರ್ ಚಿದ್ರಿ, ಅಶೋಕ ಪೇಂಟರ್, ಅಜಮೊದ್ದೀನ್, ಈಶ್ವರ ಮೈಲೂರು, ದಶರಥ ಕುಂಬಾರ, ಯಲ್ಲಪ್ಪ ಶಾಪುರ ಹಾಗೂ ಸಾಹಿತ್ಯ ಸೇವೆಗಾಗಿ ಗೌರವ ಡಾಕ್ಟರೇಟ್ ಪಡೆದ ಕಾರ್ಮಿಕನ ಪುತ್ರ ಸುಬ್ಬಣ್ಣ ಕರಕನಳ್ಳಿ ಅವರನ್ನು ಸತ್ಕರಿಸಲಾಯಿತು.