

ಬೀದರ್: ಬಿಜೆಪಿ ಸಾಮಾಜಿಕ ನ್ಯಾಯ ಜತೆಗೆ ಸಂವಿಧಾನ ಮತ್ತು ಮೀಸಲಾತಿ ವಿರೋಧಿಯಾಗಿದೆ ಎಂದು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಹಾಗೂ ಸಂವಿಧಾನ ಸಂರಕ್ಷಣಾ ಸಮಿತಿ ಮುಖಂಡ ಮಾವಳ್ಳಿ ಶಂಕರ ದೂರಿದರು.
ನಗರದಲ್ಲಿ ಕರೆದಿದ್ದ ದಲಿತಪರ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಮಾತನಾಡಿ, ಹತ್ತು ವರ್ಷಗಳಲ್ಲಿ ಭಾರತ ಅಭಿವೃದ್ಧಿ ಪಥದೆಡೆಗೆ ಹೋಗದೆ ಹಿಮ್ಮುಖವಾಗಿ ಚಲಿಸಿದೆ. ಬಿಜೆಪಿ ನಾಯಕರು, ಉದ್ದಿಮೆದಾರರು ಮತ್ತು ಪುರೋಹಿತಶಾಹಿಗಳು ಸೇರಿ ಭಾರತವನ್ನು ಬಹುತ್ವದ ವಿರುದ್ಧ ತಿರುಗಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಎನ್‌ಡಿಎ ಸರ್ಕಾರ ಜನರ ಹಸಿವು ನೀಗಿಸಲಿಲ್ಲ. ಉದ್ಯೋಗ ಕೊಡಲಿಲ್ಲ ಮತ್ತು ಜಾತ್ಯತೀತ ನಿಲುವು ತಾಳಲಿಲ್ಲ. ಕಾಂಗ್ರೆಸಿಗರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಸಾಮಾನ್ಯ ವರ್ಗದವರ ಹಕ್ಕುಗಳನ್ನು ಕಸಿದು ಮುಸ್ಲಿಮರಿಗೆ ಹಂಚುತ್ತಾರೆ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಈ ರೀತಿ ಮಾಡಲು ಬರಲ್ಲ. ಹೀಗಾಗಿ ಸಾಮಾಜಿಕ ನ್ಯಾಯದ ಪರ ಹೋರಾಡುತ್ತಿರುವ ಕಾಂಗ್ರೆಸ್‌ಗೆ ಲೋಕಸಭೆ ಚುನಾವಣೆಯಲ್ಲಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಗುರುಪ್ರಸಾದ ಕೆರಗೋಡ, ಎಸ್.ಆರ್. ಕಲ್ಲೂರ, ಅರ್ಜುನ ಭದ್ರೆ ಮಾತನಾಡಿದರು. ಪ್ರಮುಖರಾದ ಅನೀಲಕುಮಾರ ಬೆಲ್ದಾರ್, ರಮೇಶ ಡಾಕುಳಗಿ, ಬಾಬುರಾವ ಪಾಸ್ವಾನ್ ಇತರರಿದ್ದರು.