ಖೂಬಾ ಕುಮ್ಮಕ್ಕಿನಿಂದಲೇ ಪರಮೇಶ್ವರಗೆ ಅವಹೇಳನ

Ishwar Khandre
Published on

ಬೀದರ್: ನಗರದಲ್ಲಿ ಬಿಜೆಪಿ ಮುಖಂಡರು ನಡೆಸಿದ ಪ್ರತಿಭಟನೆ ವೇಳೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಬಗ್ಗೆ ಆಡಿರುವ ಅವಹೇಳನಕಾರಿ ಮಾತುಗಳು ಇಡೀ ದಲಿತ ಸಮುದಾಯಕ್ಕೆ ಮಾಡಿದ ಅವಮಾನ. ಇದು ಬಿಜೆಪಿ ಸಂಸ್ಕೃತಿಗೆ ಹಿಡಿದ ಕನ್ನಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಬಿಜೆಪಿ ಬೀದರ್ ನಲ್ಲಿ ಮೊನ್ನೆ ನಡೆಸಿದ ಪ್ರತಿಭಟನೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಕುಮ್ಮಕ್ಕಿನಿಂದಲೇ ಹಿಂಬಾಲಕರು ಪರಮೇಶ್ವರ್ ಬಗ್ಗೆ ಅತ್ಯಂತ ಅವಹೇಳನಕಾರಿ ಪದಗಳನ್ನು ಬಳಸಿ ಮಾತನಾಡಿದ್ದಾರೆ. ಇದು ರಾಜ್ಯದ ಗೃಹ ಸಚಿವರಿಗೆ ಮಾಡಿದ ಘೋರ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಈ ವರ್ತನೆಯನ್ನು ಖಂಡಿಸುತ್ತೇನೆ. ಬಿಜೆಪಿ ಕಾಂಗ್ರೆಸ್ ನಾಯಕರ ಬಗ್ಗೆ ವೈಯಕ್ತಿಕ ಆರೋಪಗಳೊಂದಿಗೆ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ. ಜಿಲ್ಲಾ ಪೊಲೀಸರು ಕೂಡಲೆ ಪ್ರತಿಭಟನೆಯಲ್ಲಿ ಗೃಹಸಚಿವರಿಗೆ ಅವಮಾನ ಮಾಡಿದವರು ಮತ್ತು ಕುಮ್ಮಕ್ಕು ನೀಡಿರುವ ಸಂಸದರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಚುನಾವಣೆ ಆಯೋಗ ಕೂಡ ಖೂಬಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಖಂಡ್ರೆ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net