

ಬೀದರ್: ಕೈಲಾಗದವರ ಕೊನೆಯ ಅಸ್ತ್ರವೇ ಅಪಪ್ರಚಾರ. ಹಾಲಿ ಸಂಸದರಾದ ಕೇಂದ್ರ ಸಚಿವ ಭಗವಂತ ಖೂಬಾ ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬೀದರ್ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಈಶ್ವರ್ ಖಂಡ್ರೆ ಹರಿಹಾಯ್ದಿದ್ದಾರೆ.
ಬಾರ್ ಅಸೋಸಿಯೇಷನ್ ಮತ್ತು ಬಾರ್ ಕೌನ್ಸಿಲ್ ನಡುವಿನ ವ್ಯತ್ಯಾಸವೂ ಗೊತ್ತಿರದವರು ಶಾಸನಸಭೆ ಸದಸ್ಯರಾದರೆ ಇಂತಹ ಕ್ಷುಲ್ಲಕ ಮತ್ತು ಆಧಾರರಹಿತ ಆರೋಪ ಮಾಡುತ್ತಾರೆ ಎಂದು ಖೂಬಾ ವಿರುದ್ಧ ವ್ಯಂಗ್ಯವಾಡಿದ್ದಾರೆ. ವಕೀಲರು ನೋಂದಣಿ ಮಾಡಿಸುವುದು ವಕೀಲರ ಪರಿಷತ್ತಿನಲ್ಲೇ ಹೊರತು, ವಕೀಲರ ಸಂಘದಲ್ಲಿ ಅಲ್ಲ. ಖೂಬಾ ಅವರೇ ಮೊದಲು ಮೂಲಭೂತ ವಿಚಾರ ಅರಿತುಕೊಳ್ಳಿ ಎಂದು ಸಾಗರ್ ಹೇಳಿದ್ದಾರೆ.
ಸಾಗರ್ ಖಂಡ್ರೆ ವಕೀಲರೇ ಅಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡುವ ಮುನ್ನ ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ಬಾರ್ ಕೌನ್ಸಿಲ್ ನಲ್ಲಿ ಖಚಿತಪಡಿಸಿಕೊಳ್ಳಬೇಕಿತ್ತು ಅಲ್ಲವೆ ಎಂದು ಪ್ರಶ್ನಿಸಿರುವ ಸಾಗರ್, ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಖೂಬಾ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.
ತಾವು 2022ರಲ್ಲೇ ಕನರ್ಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ (ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್) ವಕೀಲನಾಗಿ ನೋಂದಾಯಿಸಿದ್ದು, ನೋಂದಣಿ ಸಂಖ್ಯೆ ಕೆಎಆರ್/804/2022 ಇದೆ. ಬಾರ್ ಕೌನ್ಸಿಲ್ ವೆಬ್‌ಸೈಟ್ ನ ಮೆಂಬಸ್೯ ಲಿಸ್ಟ್ ನಲ್ಲೂ ನನ್ನ ಹೆಸರಿದೆ. ಬ್ರೌಸ್ ಮಾಡಿ ನೋಡಿ ಎಂದು ಸಲಹೆ ನೀಡಿರುವ ಸಾಗರ್, ವೆಬ್ ಸೈಟ್ ಸ್ಕ್ರೀನ್ ಶಾಟ್ ಪುರಾವೆಯಾಗಿ ಒದಗಿಸಿದ್ದಾರೆ.
ರಾಜಕೀಯಕ್ಕೆ ಬರುವ ಮೊದಲೇ ಸಾಗರ್ ಇಷ್ಟೊಂದು ಸುಳ್ಳು ಹೇಳಿ ತಿರುಗಾಡುತ್ತಿದ್ದಾರೆ ಎಂದು ಖೂಬಾ ಹೇಳಿದ್ದಾರೆ. ಸುಳ್ಳು ಖೂಬಾ ಮನೆದೇವರು. ಸುಳ್ಳಿನ ಸರಮಾಲೆ ಹೆಣೆಯುವುದರಲ್ಲಿ ನಿಸ್ಸೀಮರು. 10 ವರ್ಷದಿಂದ ಎಷ್ಟು ಸುಳ್ಳು ಹೇಳಿ ಜನರನ್ನು ಮರಳು ಮಾಡುತ್ತಿದ್ದಾರೆ ಎಂಬುದು ಇಡೀ ಬೀದರ್ ಜಿಲ್ಲೆ ಜನರಿಗೆ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ.