

ಬೀದರ್: ನಗರ ಸೇರಿ ಜಿಲ್ಲಾದ್ಯಂತ ಶ್ರೀ ರಾಮ ನವಮಿಯನ್ನು ಬುಧವಾರ ಶ್ರದ್ಧಾ ಭಕ್ತಿಯೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು. ಮರ್ಯಾದಾ ಪುರುಷೋತ್ತಮನಿಗೆ ವಿಶೇಷ ಪೂಜಾಭಿಷೇಕ ನಡೆದವು. ರಾಮನಿಗೆ ಮಾಡಿದ ಪುಷ್ಪಾಲಂಕಾರ ಕಣ್ಮನ ಸೆಳೆವ ಜತೆಗೆ ಭಕ್ತಿಭಾವ ಮೂಡಿಸಿತು. ಅಲ್ಲಲ್ಲಿ ಶ್ರೀರಾಮನ ಕುರಿತು ಉಪನ್ಯಾಸ ನಡೆದವು. ರಾಮಕಥಾ ಸಹ ಹೇಳಲಾಯಿತು.
ನಗರದ ಪಾಪನಾಶ ರಸ್ತೆಯ ಶ್ರೀ ಸಮರ್ಥ ರಾಮ ಮಂದಿರದಲ್ಲಿ ಬೆಳಗ್ಗೆಯಿಂದ ತಡರಾತ್ರಿವರೆಗೆ ವಿವಿಧ ಕಾರ್ಯಕ್ರಮ ಜರುಗಿದವು. ಇಲ್ಲಿನ ಆಕರ್ಷಕ ಶ್ರೀರಾಮ, ಲಕ್ಷ್ಮಣ ಮತ್ತು ಸೀತಾಮಾತೆ ಮೂರ್ತಿಗಳ ವಿಶೇಷ ಪುಷ್ಪಾಲಂಕಾರ ಕಣ್ಮನ ಸೆಳೆಯಿತು. ವಿಶೇಷ ಪೂಜೆ, ಅಭಿಷೇಕ ನಡೆದವು. ಮಹಿಳಾ ಬಳಗದಿಂದ ಶ್ರೀರಾಮನಿಗೆ ತೊಟ್ಟಿಲು ಸೇವೆ ನೆರವೇರಿತು. ಮಂದಿರಕ್ಕೆ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆದರು. ಎಲ್ಲರಿಗೂ ಅಚ್ಚುಕಟ್ಟಾಗಿ ದಿನವಿಡೀ ಮಹಾಪ್ರಸಾದ ವಿತರಿಸಲಾಯಿತು. ನಗರದ ಹಳೆಯ ಭಾಗದ ವನವಾಸಿ ರಾಮ ಮಂದಿರದಲ್ಲೂ ಶ್ರದ್ಧೆ, ಭಕ್ತಿಯಿಂದ ನಾನಾ ಕಾರ್ಯಕ್ರಮ ನಡೆದವು.
ಕೆಇಬಿ ಹತ್ತಿರದ ಶ್ರೀ ಹನುಮಾನ ಮಂದಿರದಲ್ಲಿ ಬೆಳಗ್ಗೆ ವಿಶೇಷ ಪೂಜೆ ಮತ್ತಿತರ ಕಾರ್ಯಕ್ರಮ ನಡೆದವು. ಮಧ್ಯಾಹ್ನ ರಾಮನ ತೊಟ್ಟಿಲೋತ್ಸವ ನೆರವೇರಿದ ಬಳಿಕ ಮಹಾಪ್ರಸಾದ ವಿತರಿಸಲಾಯಿತು. ಸಂಜೆ ನಗರದಲ್ಲಿ ಭವ್ಯ ಶೋಭಾಯಾತ್ರೆ ನಡೆಯಿತು.
ಹಳೆಯ ಆದರ್ಶ ಬಡಾವಣೆ ಶ್ರೀ ಸಾಯಿ ಮಂದಿರದಲ್ಲಿ ರಾಮ ನವಮಿ ನಿಮಿತ್ತ ಶ್ರೀ ಸಾಯಿ ಸೇವಾ ಸಮಿತಿಯಿಂದ ರುದ್ರಾಭಿಷೇಕ, ಮಂಗಳಾರತಿ, ತೊಟ್ಟಿಲು ಕಾರ್ಯಕ್ರಮ ನಡೆದವು. ಸಂಜೆ ಬಡಾವಣೆಯಲ್ಲಿ ಆಕರ್ಷಕ ಪಲ್ಲಕ್ಕಿ ಮೆರವಣಿಗೆ ಜರುಗಿತು. ರಾತ್ರಿ ಭಜನೆ ಮೂಲಕ ರಾಮನವಮಿಗೆ ತೆರೆ ಬಿತ್ತು.