

ಬೀದರ್: ಶ್ರೀರಾಮ ನವಮಿ ನಿಮಿತ್ತ ಜೈಭಾರತ ಮಾತಾ ಸೇವಾ ಸಮಿತಿಯಿಂದ ನಗರದಲ್ಲಿ ಬುಧವಾರ ಭವ್ಯ ಮೆರವಣಿಗೆ ನಡೆಯಿತು.
ಸಮಿತಿ ಸಂಸ್ಥಾಪಕರಾದ ಶ್ರೀ ಹವಾ ಮಲ್ಲಿನಾಥ ಮಹಾರಾಜ (ನಿರಗುಡಿ ಮುತ್ತ್ಯಾ) ನೇತೃತ್ವದಲ್ಲಿ ಕೊಳಾರ್ ಶಕ್ತಿಲಿಂಗ ಆಶ್ರಮದಿಂದ ಆರಂಭವಾದ ಮೆರವಣಿಗೆ ನೌಬಾದ್, ಶಿವನಗರ, ಬಸ್ ನಿಲ್ದಾಣ, ಮಡಿವಾಳ ಮಾಚಿದೇವ ವೃತ್ತ, ಅಂಬೇಡ್ಕರ್ ಸರ್ಕಲ್, ಬಸವೇಶ್ವರ ವೃತ್ತ, ಎಸ್ಪಿ ಕಚೇರಿ ಮೂಲಕ ಮಲ್ಕಾಪುರದ ಭಾವಲಿಂಗ ಆಶ್ರಮಕ್ಕೆ ತಲುಪಿ ಸಮಾರೋಪಗೊಂಡಿತು.
ಅಲಂಕೃತ ವಾಹನದಲ್ಲಿ 21 ಅಡಿ ರಾಮನ ಭಾವಚಿತ್ರ ಇರಿಸಲಾಗಿತ್ತು. ಮೆರವಣಿಗೆ ಉದ್ದಕ್ಕೂ ಯುವಕರು ಜೈಶ್ರೀರಾಮ ಘೋಷಣೆ ಮೊಳಗಿಸುತ್ತ ಡಿಜೆ ಸೌಂಡ್ಗೆ ಡಾನ್ಸ್ ಮಾಡಿ ಕುಣಿದು ಕುಪ್ಪಳಿಸಿದರು. ಶಿವನಗರದಲ್ಲಿ ಎರಡು ಜೆಸಿಬಿ ಮೂಲಕ ಪುಷ್ಪವೃಷ್ಟಿ ಮಾಡಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ರಾಮ ನ್ಯಾಯ, ನೀತಿ, ಧರ್ಮದ ಪ್ರತೀಕ. ಈ ಮೂರು ವಿಷಯ ಬಂದಾಗಲೆಲ್ಲ ಮೊದಲಿಗೆ ನೆನಪಾಗುವುದೇ ಅವರು. ಆಯೋಧ್ಯೆಯಲ್ಲಿ ಆದರ್ಶ ಆಡಳಿತ ನಡೆಸಿದ್ದರು. ಭಗವಾನ್ ರಾಮರ ಸ್ಮರಣೆಯಿಂದ ಜೀವನ ಮೌಲ್ಯ ಹೆಚ್ಚುತ್ತದೆ. ರಾಮರ ಆದರ್ಶ ತತ್ವಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು | ಶ್ರೀ ಹವಾ ಮಲ್ಲಿನಾಥ ಮಹಾರಾಜ ಹೇಳಿದರು.
ಮೆರವಣಿಗೆಯಲ್ಲಿ ಪಾಲ್ಗೊಂಡ ಸಾರ್ವಜನಿಕರಿಗೆ ಪೂಜ್ಯರು 10 ಸಾವಿರ ಟೋಪಿ ಮತ್ತು ಸಮಿತಿಯ ಶಾಲು ವಿತರಿಸಿದರು. ಪ್ರಸಾದ ವ್ಯವಸ್ಥೆ ಸಹ ಮಾಡಲಾಗಿತ್ತು. ಪ್ರಮುಖರಾದ ಪಪ್ಪು ಪಾಟೀಲ್ ಖಾನಾಪುರ, ಪ್ರಕಾಶ ಶಿವಕುಮಾರ ಮದನೂರ, ಚಂದು ಪಸಾರಗೆ, ಮಾಣಿಕ, ವೀರಶೆಟ್ಟಿ, ದಿಲೀಪ ಪಾಟೀಲ್, ನಂದೇಶ ಪಾಟೀಲ್, ಗಣಪತಿ, ವಿಶ್ವ ಕೊಳಾರ್, ರೇವಪ್ಪ, ಪ್ರಕಾಶ ಕೊಳಾರ್, ಸಾಗರ್ ಪಾಟೀಲ್, ನಾಗೇಶ ಇತರರಿದ್ದರು.