ಪಕ್ಷೇತರ ಅಭ್ಯರ್ಥಿಯಾಗಿ ಡಾ.ಮೋರೆ ನಾಮಪತ್ರ

dinada chitra
Published on

ಬೀದರ್: ಭಾಲ್ಕಿಯ ಖ್ಯಾತ ವೈದ್ಯ ಡಾ. ದಿನಕರ್ ಮೋರೆ ಬೀದರ್ ಲೋಕಸಭಾ ಕ್ಷೇತ್ರದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ನಾಮಪತ್ರ ಸಲ್ಲಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪದ್ಮಾಕರ್ ಪಾಟೀಲ, ಮುಖಂಡರಾದ ಜನಾರ್ದನ್ ಬಿರಾದಾರ, ಡಾ. ಬಾಲಾಜಿ ಸಾವಳೆ, ರಾವಸಾಹೇಬ್ ಬಿರಾದಾರ, ರಾಮರಾವ್ ರಾವಣಗಾವೆ ಇದ್ದರು.

ಜನ ಸೇವೆಗೆ ಸ್ಪರ್ಧೆ: ಬೀದರ್ ಲೋಕಸಭಾ ಕ್ಷೇತ್ರದ ಜನರ ಸೇವೆಗಾಗಿ ಚುನಾವಣೆಗೆ ಸ್ಪರ್ಧಿಸಿರುವೆ ಎಂದು ಡಾ. ದಿನಕರ್ ಮೋರೆ ಹೇಳಿದರು.
ನಾಲ್ಕೂವರೆ ದಶಕದಿಂದ ವೈದ್ಯ ವೃತ್ತಿಯಲ್ಲಿರುವೆ. ಮಕ್ಕಳ ತಜ್ಞನಾಗಿ ಬೀದರ್ ಹಾಗೂ ಕಲಬುರಗಿ ಜಿಲ್ಲೆಯ ಜನರಿಗೆ ವೈದ್ಯಕೀಯ ಸೇವೆ ಒದಗಿಸಿದ್ದೇನೆ. ಮಾನವೀಯ ಸೇವೆಯಿಂದಾಗಿ ಹೆಸರು ಮಾಡಿದ್ದೇನೆ ಎಂದು ತಿಳಿಸಿದರು.
ನನ್ನ ತಂದೆ ಮಾಧವರಾವ್ ಜವಳಗೆಕರ್ 1957 ರಿಂದ 1962 ರ ವರೆಗೆ ಹುಲಸೂರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದರು. ಹೀಗಾಗಿ ಜನಸೇವೆಯ ತುಡಿತ ನನಗೆ ರಕ್ತಗತವಾಗಿಯೇ ಬಂದಿದೆ ಎಂದು ಹೇಳಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭಾಲ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‍ನ ಪ್ರಬಲ ಆಕಾಂಕ್ಷಿಯಾಗಿದ್ದೆ. ಆದರೆ, ಕೊನೆ ಗಳಿಗೆಯಲ್ಲಿ ಟಿಕೆಟ್ ಕೈತಪ್ಪಿತು. ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಸಾಮಾಜಿಕ ನ್ಯಾಯ ಇಲ್ಲದಾಗಿದೆ. ಸಾಮಾಜಿಕ ಕಳಕಳಿ ಇರುವವರನ್ನು ಗುರುತಿಸುವ ಕೆಲಸ ಕೆಲಸವೂ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜನ ಸೇವೆಗೆ ರಾಜಕೀಯ ಅಧಿಕಾರದ ಅವಶ್ಯಕತೆ ಇದೆ. ಹೀಗಾಗಿ ಚುನಾವಣಾ ಕಣಕ್ಕೆ ಇಳಿದಿದ್ದೇನೆ. ಕ್ಷೇತ್ರದ ಎಲ್ಲೆಡೆ ಸರ್ವ ಸಮುದಾಯಗಳ ಬೆಂಬಲ ತಮಗೆ ವ್ಯಕ್ತವಾಗುತ್ತಿದೆ. ಹೀಗಾಗಿ ನನ್ನ ಗೆಲುವು ನಿಶ್ಚಿತವಾಗಿದೆ ಎಂದು ಹೇಳಿದರು.
ಏಪ್ರಿಲ್ 19 ರಂದು ಬೀದರ್ ಲೋಕಸಭಾ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳ ಬೆಂಬಲಿಗರೊಂದಿಗೆ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದೇನೆ. ನಾಮಪತ್ರದ ನಂತರ ಜಿಲ್ಲಾಧಿಕಾರಿ ಕಚೇರಿಯಿಂದ ಲಾವಣ್ಯ ಫಂಕ್ಷನ್ ಹಾಲ್‍ವರೆಗೆ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net