ಖೂಬಾ ಕೊನೆಯ ಚುನಾವಣೆ ಇದು

congress
Published on

ಬೀದರ್: ಸೋಲಿನ ಭೀತಿಯಿಂದ ನಮ್ಮ ಕುಟುಂಬದ ವಿರುದ್ಧ ವೈಯಕ್ತಿಕ ಟೀಕೆ ಮಾಡುತ್ತಿರುವ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರದು ಇದು ಕೊನೆಯ ಚುನಾವಣೆ. ಮುಂದೆ ಅವರಿಗೆ ಜಿಲ್ಲಾ ಪಂಚಾಯಿತಿ ಟಿಕೆಟ್ ಸಹ ಬಿಜೆಪಿ ಕೊಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ನಗರದ ಗಣೇಶ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿ, ಖೂಬಾ ಅವರಿಗೆ ಮತದಾರರು ಎರಡು ಸಲ ಆಶೀರ್ವದಿಸಿದ್ದಾರೆ. ಕೇಂದ್ರದಲ್ಲಿ ಮಂತ್ರಿ ಆಗಿದ್ದರೂ ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ. ಯಾವ ಗ್ರಾಮಕ್ಕೆ ಬಂದಿದ್ದಾರೆ? ಜನರ ಕಷ್ಟ ಅರಿಯಲು ಬಂದಿದ್ದಾರಾ? ಕರೊನಾ ವೇಳೆ ಜನ ಸಾಯುತ್ತಿದ್ದರೂ ಖೂಬಾ ಮೌನಕ್ಕೆ ಶರಣಾಗಿದ್ದರು ಎಂದು ದೂರಿದರು.
ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಮಾತನಾಡಿದರು. ಪೌರಾಡಳಿತ ಸಚಿವ ರಹೀಮ್ ಖಾನ್, ಮಾಜಿ ಸಚಿವರಾದ ರಾಜಶೇಖರ ಪಾಟೀಲ್, ಪಿಜಿಆರ್ ಸಿಂಧ್ಯಾ, ಶಾಸಕರಾದ ಡಾ.ಅಜಯಸಿಂಗ್, ಅಲ್ಲಮಪ್ರಭು ಪಾಟೀಲ್, ಬಿ.ಆರ್. ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ, ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಮಾಜಿ ಶಾಸಕರಾದ ಅಶೋಕ ಖೇಣಿ, ಕೈಲಾಶ ಪಾಟೀಲ್, ವಿಜಯಸಿಂಗ್, ಪ್ರಮುಖರಾದ ಮಾಲಾ ನಾರಾಯಣರಾವ, ಭೀಮಸೇನರಾವ ಸಿಂಧೆ, ಬಸವರಾಜ ಜಾಬಶೆಟ್ಟಿ, ಸುಭಾಷ ರಾಠೋಡ್ ಇತರರಿದ್ದರು.
ಇದಕ್ಕೂ ಮುನ್ನ ಬೃಹತ್ ರೋಡ್ ಶೋ ನಡೆಸಿದ ಸಾಗರ್ ಖಂಡ್ರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಗೋವಿಂದರಡ್ಡಿ ಅವರಿಗೆ ನಾಮಪತ್ರ ಸಲ್ಲಿಸಿದರು.

ಸಿಎಂ, ಡಿಸಿಎಂ 24ಕ್ಕೆ
ಕಾಂಗ್ರೆಸ್ ಪರ ಪ್ರಚಾರಕ್ಕಾಗಿ ಏ.24ರಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನಗರಕ್ಕೆ ಬರಲಿದ್ದಾರೆ. ಗಣೇಶ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ಮಾಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಸಾರ್ವಜನಿಕರು ಆಗಮಿಸಬೇಕೆಂದು ಸಚಿವ ಖಂಡ್ರೆ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net