ಮಹಾತ್ಮರನ್ನು ಜಾತಿಗೆ ಸೀಮಿತಗೊಳಿಸಬೇಡಿ

Jai Bharat Mata Seva Samiti
Published on

ಬೀದರ್: ದೇಶ, ಸಮಾಜಕ್ಕೆ ಸರ್ವಸ್ವ ತ್ಯಾಗ ಮಾಡಿದಂಥ ಮಹಾಪುರುಷರನ್ನು ಯಾವೊಂದು ಜಾತಿಗೆ ಸೀಮಿತಗೊಳಿಸಬಾರದು. ಅವರು ದೇಶದ ಬಹುದೊಡ್ಡ ಆಸ್ತಿ ಎಂದು ಜೈ ಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಹವಾ ಮಲ್ಲಿನಾಥ ಮಹಾರಾಜ ಹೇಳಿದರು.
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಲೋಹಾ ತಾಲೂಕಿನ ಮಾರತಾಳದಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಮಾತನಾಡಿ, ಮಹಾತ್ಮರು, ಸ್ವಾತಂತ್ರ್ಯ ವೀರರನ್ನು ಜಾತಿಭೇದ ಬಿಟ್ಟು ಗೌರವದಿಂದ ಕಾಣಬೇಕು. ಯಾವ ಕಾರಣಕ್ಕೂ ಮಹಾತ್ಮರನ್ನು ಜಾತಿ, ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದರು.
ಅಂಬೇಡ್ಕರ್ ಆಶಯದಂತೆ ಸಂವಿಧಾನದ ನಿಯಮ ಪಾಲನೆ ಮಾಡುವುದರೊಂದಿಗೆ ದೇಶವಾಸಿಗಳು ಗೌರವ ನೀಡಬೇಕು. ಸಂವಿಧಾನವೇ ಭಾರತೀಯರಿಗೆಲ್ಲ ಶ್ರೇಷ್ಠ ಗ್ರಂಥ. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ದಿವ್ಯ ಮಂತ್ರ ಅನುಸರಿಸಿ ಅವರ ಕನಸು ನನಸಾಗಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಶಾಸಕಿ ಆಶಾತಾಯಿ ಸಿಂಧೆ ಉದ್ಘಾಟಿಸಿ ಮಾತನಾಡಿದರು. ಪ್ರಮುಖರಾದ ಸಿದ್ಧಾರ್ಥ ತಲವಾರೆ, ದಾಸರಾವ ಹಂಬರಡೆ, ಸಂತೋಷ ಸಿಂಗಲೆ, ಪಪ್ಪು ಪಾಟೀಲ್ ಖಾನಾಪುರ ಇತರರಿದ್ದರು.
ಕಾರ್ಯಕ್ರಮಕ್ಕೂ ನಾಂದೇಡ್ ಹತ್ತಿರದ ಶ್ರೀ ಶಂಕರಲಿಂಗ ಆಶ್ರಮದಿಂದ 30 ಕಿಮೀ ದೂರದ ಮಾರತಾಳವರೆಗೆ ಡಾ.ಅಂಬೇಡ್ಕರ್ ಅವರ ಬೃಹತ್ ಭಾವಚಿತ್ರವನ್ನು ಅಲಂಕೃತ ವಾಹನದಲ್ಲಿರಿಸಿ ಮೆರವಣಿಗೆ ನಡೆಸಲಾಯಿತು. ನೂರಾರು ವಾಹನಗಳು ಪಾಲ್ಗೊಂಡಿದ್ದವು.
ಪ್ರತಿವರ್ಷ ಅಂಬೇಡ್ಕರ್ ಜಯಂತ್ಯುತ್ಸವವನ್ನು ದೇಶದ ವಿವಿಧೆಡೆ ಪೂಜ್ಯರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಈ ಹಿಂದೆ ನವದೆಹಲಿ, ಮುಂಬೈಗಳಲ್ಲಿ ಕಾರ್ಯಕ್ರಮ ನಡೆದಿತ್ತು. ಈ ಬಾರಿ ಮಾತರಾಳದಲ್ಲಿ ಸಂಘಟಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net