

ಔರಾದ್: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಬೃಹತ್ ವಿಶ್ವವಿದ್ಯಾಲಯವಿದ್ದಂತೆ. ಹೀಗಾಗಿ ಅವರು ಜ್ಞಾನದ ಕಣಜವೇ ಆಗಿದ್ದರು. ಬಾಬಾ ಸಾಹೇಬರ ಜ್ಞಾನ ಎಲ್ಲರಿಗೂ ದಾರಿದೀಪವಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪುರ ಹೇಳಿದರು.
ಸಂತಪುರದ ಶ್ರೀ ಸಿದ್ಧರಾಮೇಶ್ವರ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ದಲಿತ ಸಂಘರ್ಷ ಸಮಿತಿ (ಬಿ.ಕೃಷ್ಣಪ್ಪ ಬಣ) ಆಯೋಜಿಸಿದ್ದ ಪ್ರಶಸ್ತಿ ಪತ್ರ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಬೇಡ್ಕರ್ ಅವರು ಅಧ್ಯಯನಕ್ಕೆ ಮೊದಲ ಆದ್ಯತೆ ನೀಡಿದ್ದರು. ಅವರು ಓದದಿರುವ ವಿಷಯಗಳೇ ಇಲ್ಲ. ಹೆಚ್ಚೆಚ್ಚು ಓದಿದರೆ ಹಕ್ಕುಗಳನ್ನು ತಿಳಿದುಕೊಳ್ಳಲು ಮತ್ತು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂಬುದನ್ನು ಅರಿತಿದ್ದರು ಎಂದರು.
ನಮಗೆ ಹಕ್ಕುಗಳ ಬಗ್ಗೆ ಸಂಪೂರ್ಣ ಅರಿವಿರಬೇಕು. ಅಂದಾಗಲೇ ರಕ್ಷಣೆ ಪಡೆದುಕೊಳ್ಳಲು ಸಾಧ್ಯ. ಇದಕ್ಕೆ ಶಿಕ್ಷಣ ಒಂದೇ ದಾರಿ ಎಂಬುದನ್ನು ಅಂಬೇಡ್ಕರ್ ಅರಿತು ಜಗತ್ತಿನ ನಾನಾ ವಿಶ್ವವಿದ್ಯಾಲಯಗಳಲ್ಲಿ ಅನೇಕ ಪದವಿ ಪಡೆದಿದ್ದರು. ಇಂದಿನ ಮಕ್ಕಳಿಗೆ ಅವರು ದಾರಿದೀಪವಾಗಲಿ ಎಂದು ಆಶಿಸಿದರು.
ಭಾರತೀಯ ಬಸವ ಬಳಗದ ಜಿಲ್ಲಾಧ್ಯಕ್ಷ ಡಾ.ಸಂಜುಕುಮಾರ ಜುಮ್ಮಾ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಾಧನೆ ಮಾಡಬೇಕಾದರೆ ಏಕೈಕ ಅಸ್ತ್ರ ವಿದ್ಯೆ. ಮಕ್ಕಳು ಶೈಕ್ಷಣಿಕ ಜೀವನ ಸದುಪಯೋಗ ಪಡೆದುಕೊಳ್ಳಬೇಕು. ಡಾ.ಬಿ.ಆರ್. ಅಂಬೇಡ್ಕರ್ ಅವರಂತೆ ಅಧ್ಯಯನಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು.
ಪತ್ರಕರ್ತ ಮಲ್ಲಪ್ಪ ಗೌಡ ಮಾತನಾಡಿದರು. ಪ್ರಾಚಾರ್ಯ ನವೀಲಕುಮಾರ ಉತ್ಕಾರ್, ತುಕಾರಾಮ ಹಸನ್ಮುಖಿ, ಕಲ್ಲಪ್ಪ ಬುಟ್ಟೆ, ರಾಜಕುಮಾರ, ಸುಧಾ ಕೌಟಗೆ, ಮೀರತಾಯಿ, ವನದೇವಿ, ಪ್ರಿಯಾಂಕ್, ಮೀನಾಕ್ಷಿ ಸ್ವಾಮಿ, ವಿಠಲರಡ್ಡಿ ಇತರರಿದ್ದರು.
ಕಲಾ, ವಾಣಿಜ್ಯ ವಿಭಾಗದಲ್ಲಿ ಅಗ್ರಶ್ರೇಣಿ ಪಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಮತ್ತು ಅವರ ಪಾಲಕರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನ ಮಾಡಲಾಯಿತು.