

ಬೀದರ್: ಕಳೆದ 75 ವರ್ಷಗಳಿಂದ ನಮ್ಮ ಪ್ರಜಾಪ್ರಭುತ್ವದ ತಳಹದಿ ಇನ್ನೂ ಗಟ್ಟಿಯಾಗಿರಲು ಕಾರಣ ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಜಗತ್ತಿಗೆ ಮಾದರಿಯಾದ ಸಂವಿಧಾನ ಎಂದು ಜಿಲ್ಲಾಧಿಕಾರಿ ಗೋವಿಂದರಡ್ಡಿ ಹೇಳಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಬಾಬಾಸಾಹೇಬರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಅಂಬೇಡ್ಕರ್ ಮುಂದಾಲೋಚನೆ ಮೂಲಕ ಶ್ರೇಷ್ಠ ಸಂವಿಧಾನ ನೀಡಿದ್ದು, ದೇಶದ ಎಲ್ಲ ಜನರ ಹಿತ ಕಾಪಾಡುತ್ತಿದೆ. ಜಯಂತಿ ಆಚರಿಸಿದರೆ ಸಾಲದು, ಅವರ ಆದರ್ಶ ಮತ್ತು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜಿಪಂ ಸಿಇಒ ಡಾ.ಗಿರೀಶ್ ಬದೋಲೆ ಮಾತನಾಡಿ, ಅಂಬೇಡ್ಕರ್ ಸಂವಿಧಾನ ಪಿತಾಮಹ. ದೇಶದ ಪ್ರಥಮ ಕಾನೂನು ಮಂತ್ರಿಯಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಎಸ್ಪಿ ಚನ್ನಬಸವಣ್ಣ ಲಂಗೋಟಿ ಮಾತನಾಡಿ, ಅಂಬೇಡ್ಕರ್ ವಿವಿಧ ದೇಶಗಳ ಸಂಸ್ಕೃತಿ, ಅಲ್ಲಿನ ಸಂವಿಧಾನಗಳ ಅಧ್ಯಯನ ಮಾಡಿ ಅದರಲ್ಲಿರುವ ಉತ್ತಮ ಅಂಶ ತೆಗೆದುಕೊಂಡು ನಮ್ಮ ದೇಶಕ್ಕೆ ಅನ್ವಯವಾಗುವಂಥ ಸಂವಿಧಾನ ರಚಿಸಿದ್ದಾರೆ ಎಂದರು.
ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಸಿಂಧು ಎಚ್.ಎಸ್., ಮುಖಂಡರಾದ ಮಾರುತಿ ಬೌದ್ಧೆ, ಅನೀಲಕುಮಾರ ಬೆಲ್ದಾರ್, ಫರ್ನಾಂಡೀಸ್ ಹಿಪ್ಪಳಗಾಂವ, ಉಮೇಶ ಸೋರಳ್ಳಿಕರ್, ವಿಜಯಕುಮಾರ ಸೋನಾರೆ, ಬಾಬು ಪಾಸ್ವಾನ್, ಶಿವಕುಮಾರ ನೀಲಿಕಟ್ಟಿ ಇತರರಿದ್ದರು.