ಗೋಕಾಕ್ ಮಾದರಿ ನಾಮಫಲಕ ಚಳವಳಿ

karave meeting
Published on

ಬೀದರ್: ವರನಟ ಡಾ.ರಾಜಕುಮಾರ್ ನೇತೃತ್ವದಲ್ಲಿ ನಡೆದಿದ್ದ ಗೋಕಾಲ್ ಚಳವಳಿ ಮಾದರಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಾಮಫಲಕ ಚಳವಳಿ ರಾಜ್ಯಾದ್ಯಂತ ನಡೆದಿದೆ. ನಮ್ಮ ಹೋರಾಟದ ಫಲದಿಂದಲೇ ಪ್ರಸ್ತುತ ಕಣ್ಣು ಕುಕ್ಕುವಂತೆ ಕನ್ನಡ ನಾಮಫಲಕಗಳು ರಾರಾಜಿಸುತ್ತಿವೆ ಎಂದು ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ವೇದಿಕೆ ಜಿಲ್ಲಾ, ತಾಲೂಕು ಅಧ್ಯಕ್ಷರ ಸಭೆ ಮತ್ತು ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಡು-ನುಡಿ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ಮಾತೃಭಾಷೆ ವಿಷಯದಲ್ಲಿ ಕಾರ್ಯಕರ್ತರು ಗಟ್ಟಿಯಾಗಿ ನಿಲ್ಲುವ ಅವಶ್ಯಕತೆ ಇದೆ. ಎಲ್ಲ ಮಳಿಗೆಗಳ ಮೇಲೆ ಶೇ.60 ಕನ್ನಡ ಭಾಷೆಯಲ್ಲಿಯೇ ನಾಮಫಲಕ ಅಳವಡಿಸುವಂತೆ ಆದೇಶಿಸಲಾಗಿದೆ. ರಾಜ್ಯಾದ್ಯಂತ ಕರವೇ ಹೋರಾಟ ನಡೆಸಿದ ಫಲವಾಗಿ ಇದೀಗ ಕನ್ನಡೇತರ ನಾಮಫಲಕ ಬದಲಾವಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕನ್ನಡ ನಾಮಫಲಕ ಕಡ್ಡಾಯ ಸಂಬಂಧ ಹೋರಾಟ ಮಾಡಿದ್ದರಿಂದ ನನಗೆ 14 ದಿನ ಜೈಲುವಾಸ ಆಯಿತು. ಮೂರು ತಿಂಗಳು ಹೊರಬರದಂತೆ ನೋಡಿಕೊಳ್ಳಿ ಎಂದು ಸಿಎಂ ಹೇಳಿದ್ದರು. ಮೂರು ತಿಂಗಳಲ್ಲ, ಮೂರು ವರ್ಷ ಜೈಲಿಗೆ ಹಾಕಿದರೂ ನನ್ನಲ್ಲಿರುವ ಕನ್ನಡದ ಕಿಚ್ಚು, ಛಲ ಕಡಿಮೆಯಾಗಲ್ಲ. ಇಂಥ ನೂರು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಂದರೂ ನನಗೆ ಏನೂ ಮಾಡಲು ಸಾಧ್ಯವಿಲ್ಲ. ರಾಜಕಾರಣಿಗಳು ಆಸ್ತಿ ಲೂಟಿ ಮಾಟಿ ಜೈಲಿಗೆ ಹೋದರೆ, ನಾನು ನಾಡಿನ ನೆಲ-ಜಲ, ಭಾಷೆಗಾಗಿ ಹೋರಾಡಿ ಜೈಲಿಗೆ ಹೋಗಿರುವೆ. ಕಾರ್ಯಕರ್ತರು ನನ್ನೊಂದಿಗೆ ಇರುವಾಗ ಯಾವುದಕ್ಕೂ ಜಗ್ಗಲ್ಲ, ಬಗ್ಗಲ್ಲ ಎಂದು ಗುಡುಗಿದರು.
ರಾಜ್ಯದಲ್ಲಿ ಎಲ್ಲ ರಾಜಕೀಯ ಪಕ್ಷಗಳ ಬ್ಲಡ್ ಗ್ರುಪ್ ಒಂದೇ ಇದೆ. ಹೀಗಾಗಿ ಯಾವ ಪಕ್ಷಕ್ಕೂ ನಾನು ನಂಬಲ್ಲ. ರಾಜ್ಯಕ್ಕೆ ಒಂದು ಪ್ರಾದೇಶಿಕ ಪಕ್ಷದ ಅಗತ್ಯವಿದೆ. ಶೀಘ್ರದಲ್ಲಿ ಪ್ರಾದೇಶಿಕ ಪಕ್ಷ ಉದಯವಾಗಲಿದೆ. ಈಗಾಗಲೆ ಪ್ರತಿ ಜಿಲ್ಲೆಯಲ್ಲಿ ನೂರು ಸ್ವಯಂಸೇವಕರನ್ನು ಸಿದ್ಧ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕರವೇ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳ ಮಾತನಾಡಿ, ಜಿಲ್ಲೆಯಲ್ಲಿ ನಾಡು-ನುಡಿ ಹಾಗೂ ಕನ್ನಡ ನಾಮಫಲಕ ಅಳವಡಿಕೆಗಾಗಿ ಹೋರಾಟ ಮಾಡಿದಾಗ ನಾನಾ ತೊಂದರೆ ಅನುಭವಿಸಬೇಕಾಯಿತು. ನನ್ನ ವಿರುದ್ಧ ದೂರು ದಾಖಲಿಸಿದರೂ ಹೆದರಿಲ್ಲ. ನಾರಾಯಣಗೌಡರು ನಮಗೆಲ್ಲ ಸಿಎಂ ಇದ್ದಂತೆ. ಎಲ್ಲ ಜಿಲ್ಲಾಧ್ಯಕ್ಷರು ಆಯಾ ಜಿಲ್ಲೆಯ ಸಂಸದರಂತೆ ಕೆಲಸ ಮಾಡಿದಾಗಲೇ ರಾಜ್ಯದಲ್ಲಿ ಕನ್ನಡವನ್ನು ಗಟ್ಟಿಯಾಗಿ ಬೆಳೆಸಬಹುದು ಎಂದು ತಿಳಿಸಿದರು.
ವೇದಿಕೆ ಪ್ರಮುಖರಾದ ಖಾದರ್ ಪಾಶಾ, ಬಿ.ಸಣ್ಣಿರಪ್ಪ, ವಿನೋದ ಅಬ್ಬಿಗೆರೆ, ಸಚಿನ್ ಗಾಣಿಗೇರ, ಸಹನಾ ಶೇಖರ, ಹೇಮಲತಾ, ಮಮತಾ ಗೌಡ, ವಿನೋದರಡ್ಡಿ ರಾಯಚೂರು, ಭೀಮು ನಾಯಕ ಯಾದಗಿರಿ, ಹಣಮಂತಪ್ಪ ಅಬ್ಬಿಗೆರೆ, ಗಿರೀಶಾನಂದ ಕೊಪ್ಪಳ, ಕುಮಾರ ಕಲಬುರಗಿ, ಮಹೇಶ ಕಾಶಿ, ಅನೀಲ ಹೇಡೆ, ಸುಭಾಷ ಗಾಯಕವಾಡ, ಸಚಿನ್ ಜಟಗೊಂಡ, ಸಚಿನ್ ತಿಬಶೆಟ್ಟಿ, ವಿನಾಯಕರಡ್ಡಿ ಬುಧೇರಾ, ಪ್ರಭು ಯಾಕತಪುರ, ಶಿವರುದ್ರ ತೀರ್ಥ, ಮಲ್ಲಿಕಾರ್ಜುನ ಶಿಕೆಂಪುರೆ, ದತ್ತಾತ್ರಿ ಅಲ್ಲಂಕೆರೆ, ಉದಯಕುಮಾರ ಅಷ್ಟೂರೆ, ಮಹೇಶ ಕಾಪಸೆ, ಲಕ್ಷ್ಮಣ ಸಾತೋಳಿ, ಗಿರೀಶ ಬಿರಾದಾರ್ ಇತರರಿದ್ದರು. ವಿಶ್ವನಾಥ ಗೌಡ ಸ್ವಾಗತಿಸಿದರು. ಗೋಪಾಲ ಕುಲಕರ್ಣಿ ನಿರೂಪಣೆ ಮಾಡಿದರು. ಸೋಮಶೇಖರ ಸಜ್ಜನ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net