

ಬೀದರ್: ಲೋಕಸಭೆ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಿಂದ ಮರಾಠ ಸಮಾಜದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ.
ಇಲ್ಲಿನ ನೌಬಾದ್ ನಲ್ಲಿರುವ ಸಮಾಜದ ಭವನದಲ್ಲಿ ಶುಕ್ರವಾರ ಸಂಜೆ ಕರೆದಿದ್ದ ಕ್ಷೇತ್ರದ ಮುಖಂಡರ ಸಭೆಯಲ್ಲಿ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಮುಖಂಡ ಡಾ.ದಿನಕರರಾವ ಮೋರೆ ಮಾತನಾಡಿ, ಕ್ಷೇತ್ರದಲ್ಲಿ ಮೂರು ಲಕ್ಷಕ್ಕೂ ಅಧಿಕ ಮರಾಠ ಮತದಾರರಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸಮಾಜದಿಂದ ಪಕ್ಷೇತರ ಅಭ್ಯರ್ಥಿಯನ್ನು ಅಖಾಡಕ್ಕೆ ಇಳಿಸುವುದಾಗಿ ತಿಳಿಸಿದರು.
ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಮರಾಠ ಸಮಾಜವನ್ನು ಕಡೆಗಣಿಸುತ್ತಿವೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಸಮಾಜದ ಮತ ಪಡೆದು ಗೆಲುವು ಸಾಧಿಸುವ ಪಕ್ಷಗಳು ಬಳಿಕ ನಮ್ಮ ಕಡೆ ನೋಡುವುದಿಲ್ಲ. ಪ್ರವರ್ಗ 2ಎ ಸೇರ್ಪಡೆ ಸೇರಿ ಸಮಾಜದ ವಿವಿಧ ಬೇಡಿಕೆ ಈಡೇರಿಸಲು ಮೀನಮೇಷ ಏಣಿಸುತ್ತಿವೆ ಎಂದು ಕಿಡಿಕಾರಿದರು.
ರಾಷ್ಟ್ರೀಯ ಪಕ್ಷಗಳಿಗೆ ಪಾಠ ಕಲಿಸಲು ಹಾಗೂ ಸದನದಲ್ಲಿ ಮರಾಠ ಸಮಾಜದ ಬಗ್ಗೆ ಧ್ವನಿ ಎತ್ತಲು ಲೋಕಸಭೆ ಚುನಾವಣೆಯಲ್ಲಿ ನಮ್ಮ ಸಮಾಜದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಅನಿವಾರ್ಯ ಎಂದರು.
ಮುಖಂಡ ಜನಾರ್ಧನ ಬಿರಾದಾರ್ ಮಾತನಾಡಿ, ಜಿಲ್ಲೆಯ ಮರಾಠ ಸಮಾಜದ ಮುಖಂಡರು, ಹಿರಿಯರ ಸಮ್ಮುಖದಲ್ಲಿ ಕಾರ್ಯಕರ್ತರ ಕೋರ್ ಕಮಿಟಿ ಸಭೆ ಶೀಘ್ರ ಕರೆದು ಒಮ್ಮತದ ಅಭ್ಯರ್ಥಿ ಹೆಸರು ಘೋಷಿಸಲಾಗುವುದು ಎಂದು ಹೇಳಿದರು.
ಜಿಪಂ ಮಾಜಿ ಅಧ್ಯಕ್ಷ, ಸಮಾಜದ ಹಿರಿಯ ಮುಖಂಡ ಪದ್ಮಾಕರ ಪಾಟೀಲ್ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ಅನೀಲ ಭೂಸಾರೆ, ಬಾಬುರಾವ ಕಾರಬಾರಿ, ಪ್ರಮುಖರಾದ ತಾತ್ಯಾರಾವ ಪಾಟೀಲ್ ಬಸವಕಲ್ಯಾಣ, ವಿಜಯಕುಮಾರ ಕಣಜಿಕರ್, ಕಿಶನರಾವ ಪಾಟೀಲ್ ಇಂಚೂರಕರ್, ವೈಜಿನಾಥ ತಗಾರೆ, ನಾರಾಯಣ ಗಣೇಶ, ಅಂಗದರಾವ ಜಗತಾಪ, ಅನೀಲ ಕಾಳೆ, ರಘುನಾಥರಾವ ಜಾಧವ್, ಶಿವಾಜಿರಾವ ಪಾಟೀಲ್ ಮುಂಗನಾಳ, ಡಾ.ಬಾಲಾಜಿ ಸಾವಳೆ, ಬಾಬುರಾವ ಹುಣಸನಾಳೆ, ನರೇಶ ಭೋಸ್ಲೆ ಆಳಂದ ಇತರರಿದ್ದರು.