ಮೈತ್ರಿಯಿಂದ ಹೊಸ ಅಲೆ ಸೃಷ್ಟಿ

ashok meeting
Published on

ಬೀದರ್: ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ರಾಜ್ಯದಲ್ಲಿ ಹೊಸ ಅಲೆ ಸೃಷ್ಟಿಯಾಗಿದೆ. ದೇಶಕ್ಕೆ ನರೇಂದ್ರ ಮೋದಿ ಅವರೇ ಬೇಕು ಎಂಬುದು ಜನರ ನಿರ್ಧಾರವಾಗಿದೆ. ನಮ್ಮ ಮೈತ್ರಿ ಹಾಲು-ಜೇನಿನಂತಿದ್ದು, ಉತ್ತಮ ಸಮ್ಮಿಲನ. ಕಾಂಗ್ರೆಸ್ಗೆ ಸೋಲಿಸುವ ಹುರುಪು ಬಿಜೆಪಿ ಜತೆಗೆ ಜೆಡಿಎಸ್ನವರಲ್ಲೂ ಸಾಕಷ್ಟಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಶಿವನಗರದಲ್ಲಿರುವ ಕೇಂದ್ರ ಸಚಿವ, ಲೋಕಸಭಾ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ನಿವಾಸದಲ್ಲಿ ಆಯೋಜಿಸಿದ್ದ ಬಿಜೆಪಿ-ಜೆಡಿಎಸ್ ಮುಖಂಡರ ಸಮನ್ವಯ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿ, ಸಮಾಜ ಮತ್ತು ದೇಶ ಒಡೆಯುವ ಮನಸ್ಥಿತಿಯ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸುವ ಕಾಲ ಬಂದಿದೆ. ಮೈತ್ರಿ ಮಾಡಿಕೊಂಡಿದ್ದರಿಂದ ಏನೂ ಆಗಲ್ಲ ಎಂದು ಕಾಂಗ್ರೆಸಿಗರು ಟಾಂಗ್ ನೀಡುತ್ತಿದ್ದಾರೆ. ಏನಾಗಲಿದೆ ಎಂದು ಹಿಯಾಳಿಸಿ ಛೇಡಿಸಿ ಮಾತನಾಡುತ್ತಿದ್ದಾರೆ. ಅವರಿಗೆ ನಮ್ಮ ತಾಕತ್ತು ತೋರಿಸಬೇಕಿದೆ. ಡಿ.ಕೆ. ಸುರೇಶ್ ಸ್ಪರ್ಧಿಸಿದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಇಂದು ಕಾಂಗ್ರೆಸ್ ಪರ ಬೆಟ್ ಕಟ್ಟಲು ಯಾರೂ ಸಿದ್ಧರಿಲ್ಲ. ಇದು ಆ ಪಕ್ಷದ ದುಸ್ಥಿತಿಗೆ ನಿದರ್ಶನ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದುಷ್ಟ, ಭ್ರಷ್ಟ ಆಡಳಿತ ನೀಡುತ್ತಿದೆ. ಲಂಚ ಹೊಡೆಯುವ ಮೀಟರ್ ಸರ್ಕಾರವಾಗಿದ್ದು, ಹತ್ತು ತಿಂಗಳಲ್ಲೇ ಜನರಿಂದ ಸಂಪೂರ್ಣ ತಿರಸ್ಕೃತವಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ನಮ್ಮ ಶಕ್ತಿ ವೃದ್ಧಿಸಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಒಂದೂ ಸ್ಥಾನ ಗೆಲ್ಲಬಾರದು. ಇದಕ್ಕಾಗಿ ಎರಡೂ ಪಕ್ಷದ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ಕರೆ ನೀಡಿದರು.
ಮೋದಿ ಪ್ರಧಾನಿ ಆಗೇ ಆಗ್ತಾರೆ. ಅವರಿಗೆ ಈಶ್ವರನ ಆಶೀರ್ವಾದ ಇದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ. ಆದರೆ ಸಚಿವ ರಾಜಣ್ಣ ಅವರು ದೇವೇಗೌಡರಿಗೆ ಸಾಯುವ ವಯಸ್ಸು ಎಂದು ಹೇಳುತ್ತಾರೆ. ನಾಚಿಕೆ ಬರಬೇಕು. ಮಾನವೀಯತೆ ಇದೆಯಾ? ಸೋಲಿನ ಭಯದಿಂದ ಕಾಂಗ್ರೆಸಿಗರು ಏನೇನೋ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿದರು. ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಸಿದ್ದಲಿಂಗಪ್ಪ ಪಾಟೀಲ್, ಶರಣು ಸಲಗರ, ಎಂಎಲ್ಸಿ ರಘುನಾಥರಾವ ಮಲ್ಕಾಪುರೆ, ಮಾಜಿ ಶಾಸಕರಾದ ಅಮರನಾಥ ಪಾಟೀಲ್, ಎಂ.ಜಿ. ಮುಳೆ, ಪ್ರಕಾಶ ಖಂಡ್ರೆ, ಮಲ್ಲಿಕಾರ್ಜುನ ಖೂಬಾ, ಪ್ರಮುಖರಾದ ಈಶ್ವರಸಿಂಗ್ ಠಾಕೂರ್, ಪೀರಪ್ಪ ಯರನಳ್ಳೆ, ಕಿರಣ ಪಾಟೀಲ್, ಶಶಿ ಹೊಸಳ್ಳಿ, ಮಹೇಶ್ವರಿ ವಾಲಿ, ಶಾಂತಲಿಂಗ ಸಾವಳಗಿ, ಅಶೋಕ ಕೊಡಗೆ, ರಾಜಶೇಖರ ಜವಳೆ, ಇಸ್ಮಾಯಿಲ್ ಚಾಚಾ ಬೆಳಕುಣಿ, ರಾಜು ಚಿಂತಾಮಣಿ, ಐಲಿನ್ ಜಾನ್ ಮಠಪತಿ, ರೌಫ್ ಕಚೇರಿವಾಲೆ, ಜಯಕುಮಾರ ಕಾಂಗೆ ಇತರರಿದ್ದರು.

ಕಾಂಗ್ರೆಸ್ ನಾಯಕರಲ್ಲಿ ನಡುಕ
ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ ಪಾಳಯದಲ್ಲಿ ನಡುಕ ಶುರುವಾಗಿದೆ. ನಮ್ಮ ಮೈತ್ರಿ ಸಮಾಜಕ್ಕೆ ದೊಡ್ಡ ಸಂದೇಶ ಸಾರಿದೆ ಎಂದು ಜೆಡಿಎಸ್ ಹಿರಿಯ ಮುಖಂಡ, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಹೇಳಿದರು. ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಈ ಮೈತ್ರಿ ಆಗಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಸಕರ್ಾರ ಅಧಿಕಾರಕ್ಕೆ ಬರುತ್ತಿರಲಿಲ್ಲ. ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಪಕ್ಷದ ಕಾರ್ಯಕರ್ತರು ಖುಷಿಯಲ್ಲಿದ್ದಾರೆ. ನಾನು ಹಿಂದೆ ಕಾಂಗ್ರೆಸ್ ಜತೆ ಮತ್ತು ಬಿಜೆಪಿ ಜತೆಗಿನ ಮೈತ್ರಿ ಆಡಳಿತ ನೋಡಿದ್ದೇನೆ. ಬಿಜೆಪಿ ದೋಸ್ತಿ ನಮಗೆ ಬಹಳ ಗೌರವ ಕೊಟ್ಟಿದೆ. ಕಾಂಗ್ರೆಸಿಗರು ಅವಕಾಶವಾದಿ ಆಡಳಿತ ಮಾಡಿದರೆ, ಬಿಜೆಪಿ ಅಭಿವೃದ್ಧಿಪರ ಆಡಳಿತ ನೀಡಿದೆ ಎಂದರು. ನಮ್ಮ ಮೈತ್ರಿಯಿಂದ ರಾಜ್ಯದಲ್ಲಿ ಹೊಸ ಸಂಚಲನ ಮೂಡಿದೆ. ನಾವೆಲ್ಲರೂ ಪಣ ತೊಟ್ಟು ಕೆಲಸ ಮಾಡುತ್ತೇವೆ. ಅಭಿವೃದ್ಧಿಗಾಗಿ ಮತ್ತೆ ಭಗವಂತ ಖೂಬಾ ಅವರನ್ನು ಗೆಲ್ಲಿಸಲೇಬೇಕಿದೆ. ಒಂದು ತಿಂಗಳು ನಿದ್ರೆ ಮಾಡದೆ ಕ್ಷೇತ್ರವಾರು ಸಭೆ ನಡೆಸುತ್ತೇವೆ. ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಡಾ.ಶೈಲೇಂದ್ರ ಬೆಲ್ದಾಳೆ ಶಾಸಕ ಇರುವುದರಿಂದ ಮತ್ತಷ್ಟು ಬಲಬಂದಿದೆ. ಇವರು 50 ಸಾವಿರ ಮತ ಗಳಿಸಿ ಗೆದ್ದರೆ, ನಾನು 32 ಸಾವಿರ ಮತ ಗಳಿಸಿ ಸೋತಿದ್ದೇನೆ. ಒಟ್ಟು ಮತಗಳ ಸಂಖ್ಯೆ 80 ಸಾವಿರ ದಾಟುತ್ತಿದೆ. ಎಲ್ಲರೂ ಸಂಘಟಿತರಾಗಿ ಪ್ರಯತ್ನಿಸಿದರೆ ದಕ್ಷಿಣ ಕ್ಷೇತ್ರದಲ್ಲೇ ನಮಗೆ ಒಂದು ಲಕ್ಷ ಮತ ಬರುವುದು ಗ್ಯಾರಂಟಿ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net