ಮರಾಠ ಸಮಾಜಕ್ಕೆ ವಿಧಾನ ಪರಿಷತ್ ಸದಸ್ಯ ಸ್ಥಾನ

Maratha Samaj Meeting - Copy
Published on

ಬೀದರ್: ಜಿಲ್ಲೆಯ ಮರಾಠ ಸಮಾಜದ ಮುಖಂಡರೊಬ್ಬರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ಕೊಡಿಸಲು ಪ್ರಯತ್ನಿಸುವೆ ಎಂದು ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆದ ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಭರವಸೆ ನೀಡಿದರು.
ನಗರದ ಎಸ್.ಆರ್.ಎಸ್. ಫಂಕ್ಷನ್ ಹಾಲ್‍ನಲ್ಲಿ ನಡೆದ ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಬೆಂಬಲಿತ ಮರಾಠ ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮರಾಠ ಸಮಾಜದವರು ಸಭೆ ನಡೆಸಿ, ಒಮ್ಮತದಿಂದ ಮುಖಂಡರೊಬ್ಬರ ಹೆಸರು ಸೂಚಿಸಿದರೆ ಚುನಾವಣೆಯಲ್ಲಿ ಜಯ ಗಳಿಸಿದ ಕೂಡಲೇ ವರಿಷ್ಠರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಬಹು ದಿನಗಳ ಮರಾಠ ಸಮಾಜದ ಬೇಡಿಕೆಯಂತೆ ಔರಾದ್ ಪಟ್ಟಣದಲ್ಲಿ ಸಂಸದರ ನಿಧಿಯಿಂದ ಮರಾಠ ಸಮಾಜದ ಭವ್ಯ ಸಮುದಾಯ ಭವನ ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.
ಎಲ್ಲ ಸಮುದಾಯಗಳ ಏಳಿಗೆ ಆಗಬೇಕು. ರೈತರ ಬಾಳು ಹಸನಾಗಬೇಕು. ಮಹಿಳೆಯರು ಸ್ವಾವಲಂಬಿಯಾಗಬೇಕು. ರೈತರು, ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎನ್ನುವುದೇ ಬಡ ರೈತನ ಮಗನಾದ ನನ್ನ ಆಶಯವಾಗಿದೆ ಎಂದು ತಿಳಿಸಿದರು.
ನಾನು ಅಭಿವೃದ್ಧಿ ಪರ ಕೆಲಸಗಳನ್ನು ಮಾಡಿದ್ದೇನೆಯೇ ಹೊರತು ಹಾಳು ಮಾಡುವ ಯಾವೊಂದು ಕೆಲಸ ಸಹ ಮಾಡಿಲ್ಲ. ನನ್ನ ಹತ್ತು ವರ್ಷಗಳ ಅಧಿಕಾರ ಅವಧಿಯಲ್ಲಿ ಭ್ರಷ್ಟಾಚಾರದ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಈಶ್ವರ ಖಂಡ್ರೆ ಪರಿವಾರದ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ ಎಂದು ಹೇಳಿದರು.
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿದೆ. ಪ್ರಧಾನಿ ಅವರು ಭಾರತೀಯರ ಶತಮಾನದ ರಾಮ ಮಂದಿರದ ಕನಸು ನನಸಾಗಿಸಿದ್ದಾರೆ. ದೇಶ ಹಾಗೂ ಬೀದರ್ ಕ್ಷೇತ್ರದ ಇನ್ನಷ್ಟು ಅಭಿವೃದ್ಧಿಗೆ ಮತ್ತೊಮ್ಮೆ ಬಿಜೆಪಿಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ಮಾರುತಿರಾವ್ ಮುಳೆ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಬುರಾವ್ ಕಾರಬಾರಿ, ಪ್ರಮುಖರಾದ ದಿಗಂಬರರಾವ್ ಮಾನಕಾರಿ, ಅಶೋಕ ಪಾಟೀಲ ಮೆಹಕರ್, ಸತೀಶ್ ವಾಸರೆ, ಮಾಧವರಾವ್ ಹಸೂರೆ ಮೊದಲಾದವರು ಮಾತನಾಡಿದರು.
ಸಭೆಯಲ್ಲಿ ಖೂಬಾ ಅವರನ್ನು ಸನ್ಮಾನಿಸಿ, ಸಕಲ ಮರಾಠ ಸಮಾಜದ ಬೆಂಬಲ ಸೂಚಿಸಲಾಯಿತು.
ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಡಾ. ಸಿದ್ಧಲಿಂಗಪ್ಪ ಪಾಟೀಲ, ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಅಮರನಾಥ ಪಾಟೀಲ, ಸಹ ಉಸ್ತುವಾರಿ ಅರಹಂತ ಸಾವಳೆ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ, ಪ್ರಧಾನ ಕಾರ್ಯದರ್ಶಿ ಕಿರಣ ಪಾಟೀಲ, ರಾಜಶೇಖರ ಪಾಟೀಲ, ಕಿಸಾನ್ ಶಿಕ್ಷಣ ಪ್ರಸಾರಕ ಮಂಡಳಿ ಅಧ್ಯಕ್ಷ ಅನಿಲ್ ಶಿಂಧೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗನಾಥರಾವ್ ಬಗ್ದೂರೆ, ಭಾಲ್ಕಿ ಎಪಿಎಂಸಿ ಮಾಜಿ ಅಧ್ಯಕ್ಷ ಅಶೋಕ ಪಾಟೀಲ ಮೆಹಕರ್, ಬೀದರ್ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ದಿಗಂಬರರಾವ್ ಪಾಟೀಲ ಚಾಂದೋರಿ, ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್‍ನ ಕಲಬುರಗಿ ಜಿಲ್ಲಾ ಅಧ್ಯಕ್ಷ ರಾಮಚಂದ್ರ ಜಗದಾಳೆ ಆಳಂದ, ಮುಖಂಡರಾದ ಅಶೋಕ ಪಾಟೀಲ ಹೊಕ್ರಾಣ, ಶರತ್ ಪಾಟೀಲ ಭಾಟಸಾಂಗವಿ, ನಾರಾಯಣ ಪಾಟೀಲ ಭಂಡಾರಕುಮಟಾ, ಸಂಜು ಪಾಟೀಲ ಹಿಪ್ಪಳಗಾಂವ್, ನಿಖಿಲ್ ಜಾಧವ್ ದಾಬಕಾ, ಓಂಪ್ರಕಾಶ ಪಾಟೀಲ ಗಂಗನಬೀಡ್, ಸುಭಾಷ್ ಬಿರಾದಾರ ಭಾಲ್ಕಿ, ವೆಂಕಟರಾವ್ ಮಾಯಿಂದೆ, ಬಾಲಾಜಿ ವಾಡಿಕರ್, ರಾಜಕುಮಾರ ಪಾಟೀಲ ಲಖನಗಾಂವ್, ಬಾಬುರಾವ್ ಬಿರಾದಾರ, ನೇತಾಜಿ ಬಿರಾದಾರ ಮುಂತಾದವರು ಇದ್ದರು.
ಬೀದರ್ ಲೋಕಸಭಾ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳ ಮರಾಠ ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಮರಾಠ ಸಮಾಜದ ಹಿತ ರಕ್ಷಿಸಿದ ಖೂಬಾ
ಕೇಂದ್ರ ಸಚಿವ ಭಗವಂತ ಖೂಬಾ ಅವರು ಜಿಲ್ಲೆಯ ಮರಾಠ ಸಮಾಜದವರ ಹಿತ ರಕ್ಷಿಸಿದ್ದಾರೆ ಎಂದು ಸಭೆಯಲ್ಲಿ ಮಾತನಾಡಿದ ಮರಾಠ ಸಮುದಾಯದ ಮುಖಂಡರು ಹೇಳಿದರು. ರಾಜ್ಯದಲ್ಲಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿ, ಅದಕ್ಕೆ ಮಾಜಿ ಶಾಸಕ ಮಾರುತಿರಾವ್ ಮುಳೆ ಅವರನ್ನು ಅಧ್ಯಕ್ಷರನ್ನಾಗಿಸುವಲ್ಲಿ ಖೂಬಾ ಅವರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು. ಬಸವಕಲ್ಯಾಣದಲ್ಲಿ ಶಿವ ಸೃಷ್ಟಿ (ಶಿವಾಜಿ ಪಾರ್ಕ್)ಗೆ ಖೂಬಾ ಅವರು 10 ಎಕರೆ ಜಮೀನು ಮಂಜೂರು ಮಾಡಿಸಿದ್ದಾರೆ. ಮರಾಠರ ಆರಾಧ್ಯದೈವ ವಿಠ್ಠಲ-ರುಕ್ಮಿಣಿ ಮಂದಿರ ದರ್ಶನಕ್ಕೆ ಆಷಾಢ ಹಾಗೂ ಏಕಾದಶಿಗೆ ಪಂಢರಪುರಕ್ಕೆ ವಿಶೇಷ ರೈಲಿನ ವ್ಯವಸ್ಥೆ ಮಾಡಿ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು. ಆರು ದಶಕಗಳಿಂದ ಜಿಲ್ಲೆಯ ಮರಾಠರ ಮತ ಪಡೆದ ಅನೇಕ ರಾಜಕಾರಣಿಗಳು ಸಮುದಾಯಕ್ಕೆ ಹೇಳಿಕೊಳ್ಳುವಂಥ ಯಾವುದೇ ಕೊಡುಗೆ ನೀಡಿಲ್ಲ. ಖೂಬಾ ಅವರು ಮಾತ್ರ ಮರಾಠ ಸಮುದಾಯಕ್ಕೆ ಪ್ರಾತಿನಿಧ್ಯ ಕಲ್ಪಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸಮಾಜದ ಮುಖಂಡರು ಅವರ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಸರ್ವರಿಗೂ ಸಮಾನ ಹಕ್ಕು ಹಾಗೂ ಅವಕಾಶಗಳು ಸಿಗಬೇಕು ಎನ್ನುವುದು ಪ್ರಜಾಪ್ರಭುತ್ವದ ಆಶಯ. ಅಧಿಕಾರ ವಿಕೇಂದ್ರೀಕರಣದಿಂದ ದೇಶದ ಅಭಿವೃದ್ಧಿ ಆಗಲಿದೆ. ಆದರೆ, ಜಿಲ್ಲೆಯಲ್ಲಿ ಅಧಿಕಾರ ಕೇಂದ್ರೀಕರಣವಾಗುತ್ತಿದೆ ಎಂದು ಮರಾಠ ಸಮಾಜದ ಯುವ ಮುಖಂಡ ದೀಪಕ್ ಪಾಟೀಲ ಚಾಂದೋರಿ ಅವರು ಈಶ್ವರ ಖಂಡ್ರೆ ಅವರ ಪರಿವಾರದ ಹೆಸರು ಪ್ರಸ್ತಾಪಿಸದೆ ನುಡಿದರು. ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬೀದರ್ ಜಿಲ್ಲೆಗೆ ಭಗವಂತ ಖೂಬಾ ಅವರ ನಾಯಕತ್ವದ ಅವಶ್ಯಕತೆ ಇದೆ. ಖೂಬಾ ಅಭಿವೃದ್ಧಿ ಪರ ಚಿಂತನೆಯ ನಾಯಕರಾಗಿದ್ದಾರೆ. ಎಲ್ಲ ಸಮಾಜಗಳ ಬಗ್ಗೆಯೂ ಅವರಿಗೆ ಕಾಳಜಿ ಇದೆ. ಚುನಾವಣೆಯಲ್ಲಿ ಗೆಲ್ಲಿಸಿ ಕ್ಷೇತ್ರದ ಮತದಾರರು ಅವರ ಕೈ ಮತ್ತಷ್ಟು ಬಲಪಡಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net