

ಭಾಲ್ಕಿ: ವಚನ ಜಾತ್ರೆ, ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಸ್ಮರಣೋತ್ಸವ ನಿಮಿತ್ತ ಪಟ್ಟಣದಲ್ಲಿ ಏ.15ರಿಂದ 21ರವರೆಗೆ ಸಾಮೂಹಿಕ ವಚನ ಪಾರಾಯಣ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶುಕ್ರವಾರ ಕರೆದಿದ್ದ ವಚನ ಪಾರಾಯಣ ಸಮಿತಿ ಸಭೆಯಲ್ಲಿ ಮಾತನಾಡಿ, ಚನ್ನಬಸವಾಶ್ರಮದಲ್ಲಿ ಪ್ರತಿದಿನ ಬೆಳಗ್ಗೆ 6ಕ್ಕೆ ಪಾರಾಯಣ ನಡೆಯಲಿದೆ. ಲಿಂಗೈಕ್ಯ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ತಮ್ಮ ಜೀವಿತಾವಧಿಯಲ್ಲಿ ಈ ಭಾಗಕ್ಕೆ ನೀಡಿದ ಕೊಡುಗೆ ಅಪಾರ. ಬಸವತತ್ವ ಪ್ರಚಾರ, ಪ್ರಸಾರ ಜತೆಗೆ ಗಡಿಯಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪನೆ, ಅನುಭವ ಮಂಟಪ ನಿರ್ಮಾಣ ಸೇರಿ ಅನೇಕ ಕಾರ್ಯಗಳ ಮೂಲಕ ಪೂಜ್ಯರು ಎಲ್ಲರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದು ಸ್ಮರಿಸಿದರು.
ಪಟ್ಟದ್ದೇವರ ಚಿಂತನೆಗಳು ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿರುವುದನ್ನು ಮನಗಂಡು 24 ವರ್ಷಗಳಿಂದ ಸ್ಮರಣೋತ್ಸವ ನೆಪದಲ್ಲಿ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನ್ನಿಧ್ಯದಲ್ಲಿ ಬಸವಣ್ಣನವರ ತತ್ವ, ಪಟ್ಟದ್ದೇವರ ಆಶಯಗಳನ್ನು ಜನತೆಗೆ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಬಾರಿ ಪಟ್ಟದ್ದೇವರ ಸ್ಮರಣೋತ್ಸವ ಅರ್ಥಪೂರ್ಣವಾಗಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸ್ವಾಗತ ಸಮಿತಿ, ಪ್ರವಚನ ಸೇವಾ, ವಚನ ಪಾರಾಯಣ ಸೇವಾ ಸೇರಿ ವಿವಿಧ ಸಮಿತಿ ರಚಿಸಿ ಐದು ದಿನದ ಕಾರ್ಯಕ್ರಮ ಯಶಸ್ಸಿಗೆ ತಯಾರಿ ನಡೆದಿದೆ ಎಂದರು.
ಸಿದ್ದಪ್ಪ ದರ್ಗೆ ಬಸವ ಗುರು ಪೂಜೆ ನೆರವೇರಿಸಿದರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಸಾಹಿತಿ ರಾಜು ಜುಬರೆ, ಪವನ್ ಬಿರಾದಾರ, ಯೋಗೇಶ, ಪಾರ್ವತಿ ಧುಮ್ಮನಸೂರೆ, ಮಹಾನಂದಾ ಮಾಶೆಟ್ಟೆ ಇತರರಿದ್ದರು. ದೀಪಕ ಠಮಕೆ ನಿರೂಪಣೆ ಮಾಡಿ ವಂದಿಸಿದರು.
ಪಾರಾಯಣ ಸಮಿತಿಗೆ ಆಯ್ಕೆ
ಸಭೆಯಲ್ಲಿ ಸಾಮೂಹಿಕ ವಚನ ಪಾರಾಯಣ ಸಮಿತಿ ಅಧ್ಯಕ್ಷರಾಗಿ ಪಾರ್ವತಿ ಚಂದ್ರಕಾಂತ ಡೋಣಗಾಪೂರೆ ಅವರನ್ನು ಆಯ್ಕೆ ಮಾಡಿ ದಂಪತಿಯನ್ನು ಪೂಜ್ಯರು ಆಶೀರ್ವದಿಸಿದರು.