

ಬೀದರ್: ದೇಶದ ಅಭಿವೃದ್ಧಿಗಾಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲಾಗಿದೆ. ಎನ್‌ಡಿಎ ಅಭ್ಯರ್ಥಿ ಭಗವಂತ ಖೂಬಾ ಅವರನ್ನು ಬೆಂಬಲಿಸುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲಿಸುವುದಾಗಿ ಮಾಜಿ ಸಚಿವ, ಜೆಡಿಎಸ್ ಹಿರಿಯ ಮುಖಂಡ ಬಂಡೆಪ್ಪ ಖಾಶೆಂಪುರ ಹೇಳಿದರು.
ಎನ್ಡಿಎ ಅಭ್ಯರ್ಥಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ನಗರದಲ್ಲಿ ಕರೆದಿದ್ದ ಬೀದರ್ ಲೋಕಸಭಾ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಳ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಭಾರತ ನರೇಂದ್ರ ಮೋದಿ ಆಡಳಿತದಲ್ಲಿ ಇರಬೇಕೆಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕರೆ ಕೊಟ್ಟಿದ್ದಾರೆ. ನೀರಾವರಿ ಯೋಜನೆ ಸೇರಿ ಪ್ರತಿಯೊಂದು ವಿಷಯದ ಬಗ್ಗೆ ಕರ್ನಾಟಕದ ಪರವಾಗಿ ಕೇಂದ್ರದಲ್ಲಿ ಧ್ವನಿ ಎತ್ತುವ, ನ್ಯಾಯ ಕೊಡಿಸುವ ಕೆಲಸ ಎಚ್.ಡಿ. ಕುಮಾರಸ್ವಾಮಿ ಮಾಡಲಿದ್ದಾರೆ. ನಮ್ಮ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಎನ್‌ಡಿಎ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.
ಪ್ರಸ್ತುತ ಭಾರತ ಉತ್ತುಂಗದಲ್ಲಿದೆ ಎಂದರೆ ಮೋದಿ ಅವರ ಆಡಳಿತದಿಂದ. ಹೀಗಾಗಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಂಡು ಬರುವ ಕೆಲಸ ಮಾಡಲಾಗುವುದು. ಖೂಬಾ ಅವರನ್ನು ಲೋಕಸಭೆಗೆ ಕಳಿಸುವ ಹೊಣೆಗಾರಿಕೆ ನಮ್ಮದು ಎಂದರು.
ಕಾಂಗ್ರೆಸ್ ಸರ್ಕಾರದ ಯಾವೊಬ್ಬ ಸಚಿವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಮೋದಿ ಹವಾದಲ್ಲಿ ನಾವು ಕೊಚ್ಚಿ ಹೋಗ್ತಿವಿ ಎಂಬ ಭಯ ಅವರಲ್ಲಿ ಕಾಡಿದ ಕಾರಣ ಮಕ್ಕಳು, ಸಂಬಂಧಿಕರಿಗೆ ಟಿಕೆಟ್ ಕೊಡಿಸಿದ್ದಾರೆ. ಈ ಚುನಾವಣೆ ನರೇಂದ್ರ ಮೋದಿ-ರಾಹುಲ್ ಗಾಂಧಿ ನಡುವಿನ ಚುನಾವಣೆ ಎಂದು ಹೇಳಿದರು.
ಜೆಡಿಎಸ್ ಎನ್‌ಡಿಎ ಜತೆ ಸೇರಿದ ಬಳಿಕ ನಮ್ಮಲ್ಲಿರುವ ಯಾವೊಬ್ಬ ಅಲ್ಪಸಂಖ್ಯಾತ ಪಕ್ಷ ಬಿಟ್ಟು ಹೋಗಿಲ್ಲ. ನಮ್ಮಲ್ಲಿನ ಸಣ್ಣಪುಟ್ಟ ಸಮಸ್ಯೆಗಳು ಏನೇ ಇದ್ದರೂ ಮರೆತು ಮೈತ್ರಿ ಧರ್ಮ ಪಾಲಿಸಬೇಕೆಂದು ದೇವೇಗೌಡರು ಕರೆ ಕೊಟ್ಟಿದ್ದಾರೆ. ಹೀಗಾಗಿ ಖೂಬಾ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡೋಣ. ಅತ್ಯಧಿಕ ಮತಗಳ ಅಂತರದೊಂದಿಗೆ ಗೆಲ್ಲಿಸಿಕೊಂಡು ಬರೋಣ ಎಂದು ಕರೆ ನೀಡಿದರು.
ಇದು ಅತ್ಯಂತ ಮಹತ್ವದ ಚುನಾವಣೆ. 2024ರ ನಂತರ ಭಾರತ ಹೇಗಿರಬೇಕು ಎಂಬ ಕಲ್ಪನೆಯೊಂದಿಗೆ ಚುನಾವಣೆ ನಡೆಯುತ್ತಿದೆ. ಮಾಜಿ ಪ್ರಧಾನಿ ದೇವೇಗೌಡ ನಾಡಿನ ಮಣ್ಣಿನ ಮಗ. ದೇಶದ ಹಿತ, ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಾಗಿದೆ. ಭಗವಂತ ಖೂಬಾ ಗೆಲುವಿಗಾಗಿ ಬಿಜೆಪಿಯೊಂದಿಗೆ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ ಪಾಟೀಲ್ ಸೋಲಪುರ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಮುಖಂಡರಾದ ಶಾಂತಲಿಂಗ ಸಾವಳಗಿ, ವಿಜಯಕುಮಾರ ಖಾಶೆಂಪುರ, ದೇವೇಂದ್ರ ಸೋನಿ, ಐಲಿನ್ ಜಾನ್ ಮಠಪತಿ, ಲಲಿತಾ ಕರಂಜೆ, ಸುರೇಶ ಸೀಗಿ, ನಬಿ ಖುರೇಷಿ, ಸೈಯದ್ ಯಶ್ರಬ್ ಅಲಿ ಖಾದ್ರಿ, ಸೈಜದ್ ಸಾಹೇಬ್, ಸಂಜುಕುಮಾರ ಯಾಕತಪುರ, ರಾಜು ಕಡ್ಯಾಳ, ರಾಜಶೇಖರ ಜವಳೆ, ಶಿವಪುತ್ರ ಮಾಳಗೆ, ಬೊಮ್ಮಗೊಂಡ ಚಿಟ್ಟಾವಾಡಿ, ತಾನಾಜಿ ತೋರಣಕರ್, ಸೂರ್ಯಕಾಂತ ದಂಡಿ, ಜಾಫಟ್ ಕಡ್ಯಾಳ, ಅಭಿ ಕಾಳೆ, ಸಂಗು ಚಿದ್ರಿ, ರಾಜು ಚಿಂತಾಮಣಿ ಇತರರಿದ್ದರು.